ಹೊಸದಿಲ್ಲಿ: ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರುವುದಿರಲಿ, ಕೊಳ್ಳುವಾಗಲೇ ಬೆಲೆಯೇರಿಕೆಯಿಂದ ಅಕ್ಷರಶಃ ಕಣ್ಣಲ್ಲಿ ನೀರು ತರಿಸುತ್ತಿದೆ.
ಏರುತ್ತಿರುವ ಚಿನ್ನದ ಬೆಲೆ ಹಾದಿಯಲ್ಲಿಯೇ ಈರುಳ್ಳಿಯೂ ಸಾಗುತ್ತಿದ್ದು, ಶೀಘ್ರದಲ್ಲಿಯೇ 100 ರೂ.ದಾಟುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
ದಿಲ್ಲಿಯಲ್ಲಿ ಇದರ ಬೆಲೆ 80 ರೂ. ದಾಟಿದ್ದು, ಜತೆ ಜತೆಗೆ ಇತರೆ ಅಗತ್ಯ ಧಾನ್ಯಗಳ ಬೆಲೆಯೂ ಕಳೆದ ಮೂರು ವಾರಗಳಲ್ಲಿ ಜಿಗಿಯುತ್ತಿದೆ. ಈರುಳ್ಳಿ ಪೂರೈಕೆಯಲ್ಲಿ ಕೊರತೆ ಕಾಣುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದಲ್ಲಿ, ಇದರ ಬೆಲೆ ಮತ್ತಷ್ಟು ಏರಲಿದೆ.
ಶುಕ್ರವಾರ ದಿಲ್ಲಿಗೆ ಸುಮಾರು 1,300 ಟನ್ ಈರುಳ್ಳಿ ಬಂದಿದ್ದು, ಇದು ಸಾಮಾನ್ಯವಾಗಿ ಮಹಾರಾಷ್ಟ್ರದ ಮಂಡಿಗೆ ಬರುವ ಶೇ.50ರಷ್ಟು ಮಾತ್ರವಿದೆ. ಇದೇ ಸಮಯದಲ್ಲಿ ಕಳೆದ ವರ್ಷ ದಿಲ್ಲಿ ಮಾರುಕಟ್ಟೆಗೆ ಸುಮಾರು 900 ಟನ್‌ಗಳ ಈರುಳ್ಳಿ ಬಂದಿದ್ದು, ಆಗ ಸಗಟು ಈರುಳ್ಳಿ ದರ ಈಗಿನ ಅರ್ಧದಷ್ಟು ಇತ್ತು.
ಕೃತಕ ಅಭಾವದ ಸೃಷ್ಟಿ: ಸರಕಾರ ಸೆಪ್ಟೆಂಬರ್ ಮಧ್ಯದಲ್ಲಿ ಈರುಳ್ಳಿ ಆಮದು ಮಾಡುಕೊಳ್ಳಲಿದೆ. ಅದಕ್ಕೂ ಮುನ್ನ ಹೆಚ್ಚಿನ ಲಾಭ ಪಡೆಯುವ ಸಲುವಾಗಿ ಮಧ್ಯವರ್ತಿಗಳು ಕೃತಕ ಅಭಾವ ಸೃಷ್ಟಿಸಿಕೊಳ್ಳುತ್ತಿದ್ದಾರೆ, ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಒಡಿಶಾ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾತ್ರ ಈರುಳ್ಳಿಯ ಅಗತ್ಯ ದಾಸ್ತಾನಿದ್ದು, ಅಗತ್ಯವಿರುವಷ್ಟು ಕಾಲ ಸಂಗ್ರಹಿಸಿಕೊಳ್ಳಬಹುದಾಗಿದೆ. ಅಡುಗೆಗೆ ಅಗತ್ಯವಾಗಿ ಬೇಕಾಗುವ ಈ ಉತ್ಪನ್ನ ಸಂಗ್ರಹಕ್ಕೆ ಯಾವುದೇ ನಿಯಂತ್ರಣವಿಲ್ಲದ ಕಾರಣ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯಗಳು ಸಾಧ್ಯವಾದಷ್ಟು ದಾಸ್ತಾನಿಗೆ ಮುಂದಾಗುವ ಅಪಾಯವಿದೆ.
ಮೊದಲ ಹಂತವಾಗಿ 5 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವ ಸುದ್ದಿಯಿತ್ತು. ಆದರೆ, ಅದು ಜಾರಿಗೊಳ್ಳದ ಕಾರಣ, ಮಾರಾಟಗಾರರು ತಮ್ಮಲ್ಲಿರುವ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡದೇ, ಬೆಲೆ ಏರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆಂಧ್ರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಈರುಳ್ಳಿಯ ಹೊಸ ಬೆಳೆ ಸೆಪ್ಟೆಂಬರ್ ಕಡೆ ವಾರ ಬರಲಿದ್ದು, ಅಲ್ಲೀವರೆಗೂ ಬೆಲೆ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ.