ಹೊಸದಿಲ್ಲಿ: ಮುಂಬಯಿ ಸರಣಿ ಸ್ಫೋಟ ಪ್ರಕರಣದಲ್ಲಿ ಬೇಕಿರುವ ಭೂಗತ ಪಾತಕಿ ಪಾಕಿಸ್ತಾನದ ಕರಾಚಿಯಲ್ಲೇ ಇದ್ದಾನೆ ಎಂಬ ವಿಷಯವನ್ನು ಆತನ ಪತ್ನಿ ಮೆಹಜಬೀನ್ ಶೇಖ್ ಟೈಮ್ಸ್ ನೌಗೆ ಶನಿವಾರ ಖಚಿತಪಡಿಸಿದ್ದಾರೆ.
ಭೂಗತ ಪಾತಕಿ ಪಾಕಿಸ್ತಾನದಲ್ಲಿ ಇರುವ ಬಗ್ಗೆ ಗೃಹ ಸಚಿವಾಲಯ ಹಲವಾರು ದಾಖಲೆಗಳನ್ನು ಒದಗಿಸಿದ್ದರೂ, ಪಾಕಿಸ್ತಾನ ಅದನ್ನು ನಿರಾಕರಿಸುತ್ತಲೇ ಬಂದಿದೆ. ದಾವೂದ್ ಪಾಕಿಸ್ತಾನದಲ್ಲಿ ಇಲ್ಲ ಎಂದು ವಾದಿಸುವ ಪಾಕಿಸ್ತಾನಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಹೊಸದಿಲ್ಲಿಯಲ್ಲಿ ಭಾನುವಾರ ನಿಗದಿಯಾಗಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ ವೇಳೆ ಈ ದಾಖಲೆಯನ್ನು ಪಾಕ್‌ಗೆ ಹಸ್ತಾಂತರಿಸಲು ಭಾರತ ನಿರ್ಧರಿಸಿದೆ.
ದಾವೂದ್ ಪಾಕಿಸ್ತಾನದಲ್ಲಿ ಇರುವ ಬಗ್ಗೆ ತನಿಖೆಗೆ ಮುಂದಾದ ಟೈಮ್ಸ್ ನೌ, ದಾವೂದ್ ಇಬ್ರಾಹಿಂ ನಿವಾಸಕ್ಕೆ ಶನಿವಾರ 12.24ಕ್ಕೆ ಕರೆ ಮಾಡಿ ವಿಚಾರಿಸಿತ್ತು. ದಾವೂದ್ ಮನೆಯಲ್ಲೇ ಇರುವ ಬಗ್ಗೆ ಆತನ ಪತ್ನಿಯೇ ತಿಳಿಸಿದ್ದಾಗಿ ಸುದ್ದಿ ವಾಹಿನಿ ತಿಳಿಸಿದೆ.
ಟೈಮ್ಸ್ ನೌ ವರದಿಗಾರರ ಕರೆ ಸ್ವೀಕರಿಸಿದ ಮಹೆಜಬೀನ್, ‘ದಾವೂದ್ ಮನೆಯಲ್ಲೇ ಇದ್ದಾರೆ. ನಿದ್ದೆ ಮಾಡುತ್ತಿದ್ದಾರೆ,’ಎಂದು ತಿಳಿಸಿದ್ದರು.
‘ದಾವೂದ್ ಪಾಕಿಸ್ತಾನದಲ್ಲೇ ಬಹಳ ವರ್ಷಗಳಿಂದ ನೆಲೆಸಿದ್ದಾನೆ. ದೇಶದಲ್ಲೇ ಆಗಾಗ ಜಾಗ ಬದಲಿಸಬಹುದು ಅಷ್ಟೇ,’ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಪಾಕಿಸ್ತಾನದ ಕರಾಚಿಯಲ್ಲಿ ಭೂಗತ ಪಾತಕಿ ದಾವೂದ್ ತನ್ನ ಕುಟುಂಬದೊಂದಿಗೆ ವಾಸವಿದ್ದು, ಆತನ ಫೋನ್ ಬಿಲ್ ಹಾಗೂ ಪಾಸ್‌ಪೋರ್ಟ್ ದಾಖಲೆಯೂ ಭಾರತದ ಬಳಿ ಇದೆ ಎಂದು ಶುಕ್ರವಾರ ಪತ್ರಿಕಾ ವರದಿ ಪ್ರಕಟವಾಗಿತ್ತು. ದುಬೈನಲ್ಲಿರುವ ತನ್ನ ಸಹಜಚ ಜಾವೇದ್‌ಗೆ ದಾವೂದ್ ಪಾಕಿಸ್ತಾನದಿಂದ ಕರೆ ಮಾಡಿದ್ದನ್ನು ಗುಪ್ತಚರ ಸಂಸ್ಥೆಗಳು ಪತ್ತೆ ಮಾಡಿದ್ದವು ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ನಾಲ್ಕು ತಿಂಗಳ ಹಿಂದೆಯೇ ವರದಿ ಮಾಡಿತ್ತು.