ಅಬುಧಾಬಿ: ಭಾರತೀಯ ಸಮುದಾಯಕ್ಕಾಗಿ ಅಬುಧಾಬಿಯಲ್ಲಿ ದೇವಸ್ಥಾನ ನಿರ್ಮಿಸಲು ಜಮೀನು ನೀಡುವುದಾಗಿ ಯುಎಇ ಭರವಸೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಭೇಟಿಯ ಮೊದಲ ದಿನವೇ ಅಲ್ಲಿನ ಆಡಳಿತ ಇಂತಹದ್ದೊಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಭಾರತೀಯ ಸಮುದಾಯದವರ ದೀರ್ಘಕಾಲದ ಕಾಯುವಿಕೆ ಅಂತ್ಯಗೊಂಡಿದೆ. ಪ್ರಧಾನಿ ಮೋದಿಯ ಭೇಟಿ ದಿನವೇ ಯುಎಇ ಸರ್ಕಾರ ದೇವಸ್ಥಾನಕ್ಕೆ ಭೂಮಿ ನೀಡುವ ನಿರ್ಧಾರ ಕೈಗೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅಬುಧಾಬಿಯ ಐತಿಹಾಸಿಕ ಶೇಖ್ ಜಾಯೆದ್ ಗ್ರಾಂಡ್ ಮಸೀದಿಗೆ ಭೇಟಿ ನೀಡಿದರು. ಸುಮಾರು 40 ನಿಮಿಷಗಳ ಕಾಲ ಮಸೀದಿಯಲ್ಲೇ ಕಳೆದರು. ಬಳಿಕ ಅಲ್ಲಿರುವ ಭಾರತೀಯ ಕಾರ್ಮಿಕರನ್ನು ಭೇಟಿಯಾದ ಮೋದಿ, ಅವರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವುಗಳನ್ನು ಪರಿಹರಿಸಲು ಭಾರತ ಸರ್ಕಾರ ಏನು ಮಾಡಬಹುದು ಎಂಬ ಬಗ್ಗೆ ಚರ್ಚಿಸಿದರು.
ಪ್ರಧಾನಿ ಮೋದಿ ಅವರ ಬದುಕಿನ ಬಗೆಗೆಗಿನ ಕಲೆಗಳನ್ನು ಪ್ರದರ್ಶಿಸಲು ದುಬೈ ಮೂಲದ ಭಾರಿಯ ಕಲಾವಿದನಿಗೆ ಭಾರತೀಯ ರಾಯಭಾರ ಕಚೇರಿ ಅವಕಾಶ ನಿರಾಕರಿಸಿದೆ.