ಹೊಸದಿಲ್ಲಿ: ಮಕ್ಕಳ ಅಶ್ಲೀಲ ಚಿತ್ರ ನಿಷೇಧಿಸಲು ಬದ್ಧವಾಗಿದ್ದು, ಎಲ್ಲ ಅಶ್ಲೀಲ ತಾಣಗಳ ನಿಷೇಧ ಸಾಧ್ಯವಿಲ್ಲ ಎಂದು ಪೋರ್ನ್ ವೆಬ್‌ಸೈಟ್ ನಿಷೇಧ ಕುರಿತ ಚರ್ಚೆ ವಿವಾದದ ಸ್ವರೂಪ ಪಡೆದಿರುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ಗೆ ಸರಕಾರ ಸೋಮವಾರ ಸ್ಪಷ್ಟಪಡಿಸಿದೆ.
‘ನಾಲ್ಕು ಗೋಡೆ ಒಳೆಗೆ ಜನ ಖಾಸಗಿಯಾಗಿ ಯಾವ ವೆಬ್‌ಸೈಟ್ ನೋಡುತ್ತಿದ್ದಾರೆ ಎಂದು ಪತ್ತೆ ಹಚ್ಚಿ, ತಡೆ ಒಡ್ಡಲು ಸಾಧ್ಯವಿಲ್ಲ. ಜನರ ಮನರಂಜನೆಗೆ ತಡೆ ಒಡ್ಡಲಾಗದು,’ ಎಂದು ಮುಖ್ಯ ನ್ಯಾಯಮೂರ್ತಿ ಎಚ್. ಎಲ್ ದತ್ತು ನೇತೃತ್ವದ ಪೀಠಕ್ಕೆ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ತಿಳಿಸಿದ್ದಾರೆ.
‘ಪೋರ್ನ್ ವೆಬ್‌ಸೈಟ್‌ಗಳ ವೀಕ್ಷಣೆ ತಡೆಗೆ ಸ್ವಯಂ ನಿಯಂತ್ರಣ ಇರಬೇಕು. ಮಕ್ಕಳು ಇಂಥ ವೆಬ್‌ಸೈಟ್ ವೀಕ್ಷಿಸದಂತೆ ಎಚ್ಚರವಹಿಸಲು, ಕಂಪ್ಯೂಟರ್‌ನಲ್ಲಿ ಚೈಲ್ಡ್ ಲಾಕ್‌ನಂಥ ವ್ಯವಸ್ಥೆಯನ್ನು ನಾಗರಿಕರು ರೂಪಿಸಿಕೊಳ್ಳಬೇಕು,’ ಎಂದು ನ್ಯಾಯಾಲಯಕ್ಕೆ ಅಟಾರ್ನಿ ಜನರಲ್ ತಿಳಿಸಿದ್ದಾರೆ.
ಆದರೆ, ಮಕ್ಕಳ ಅಶ್ಲೀಲ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಬದ್ಧ ಎಂದು ಸುಪ್ರೀಂಕೋರ್ಟ್‌ಗೆ ಸರಕಾರ ತಿಳಿಸಿದೆ. ವೆಬ್‌ಸೈಟ್‌ಗಳಲ್ಲಿನ ಅಶ್ಲೀಲ ಚಿತ್ರಗಳನ್ನು ನಿರ್ಬಂಧಿಸುವ ಬಗ್ಗೆ ನಾಗರಿಕರು ಸಲಹೆ ನೀಡಬಹುದು ಎಂದು ಅಶ್ಲೀಲ ವೆಬ್‌ಸೈಟ್‌ಗಳ ಸಂಪೂರ್ಣ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸರಕಾರ ತಿಳಿಸಿದೆ.
ಟೆಲಿಕಾಂ ಸಚಿವಾಲಯ ಜುಲೈ 31ರಂದು ಹೊರಡಿಸಿದ ಆದೇಶದ ಮೇರೆಗೆ ಇಂಟರ್ನೆಟ್ ಸೇವೆ ಪೂರೈಕೆದಾರರು ದೇಶದಲ್ಲಿ 857 ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ನಂತರ ಸರಕಾರ ಆದೇಶವನ್ನು ಮರು ಪರಿಶೀಲಿಸಿ, ಅಶ್ಲೀಲವಲ್ಲದ ವೆಬ್‌ಸೈಟ್‌ಗಳ ಮೇಲಿನ ನಿಷೇಧವನ್ನು ರದ್ದುಪಡಿಸಲು ನಿರ್ಧರಿಸಿತ್ತು.