ಹೊಸದಿಲ್ಲಿ: ‘ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತವರ ಕುಟುಂಬದ ಸದಸ್ಯರು ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಯೊಂದಿಗೆ ಮಾಡಿದ ಹಣಕಾಸಿನ ವ್ಯವಹಾರಗಳ ಮಾಹಿತಿ ನೀಡಿದರೆ ಮಾತ್ರ ಸುಗಮ ಕಲಾಪಕ್ಕೆ ಅನುವು ಮಾಡಿಕೊಡಲಾಗುವುದು,’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
‘ಮಧ್ಯಪ್ರದೇಶ ಹಾಗೂ ರಾಜಸ್ಥಾನ ಮುಖ್ಯಮಂತ್ರಿಗಳನ್ನು ಹೊಗಳುವ ಭರದಲ್ಲಿ ಪ್ರಧಾನಿ ಮೋದಿ ಅವರ ‘ಕಾನೂನು ಬಾಹಿರ’ ಕ್ರಮಗಳ ಬಗ್ಗೆ ಮೌನ ತಾಳಿದ್ದಾರೆ,’ ಎಂದು ರಾಹುಲ್ ಟಾಂಗ್ ನೀಡಿದ್ದಾರೆ.
‘ಲಲಿತ್ ಮೋದಿಗೆ ‘ರಹಸ್ಯವಾಗಿ’ ಸುಷ್ಮಾ ಸಹಕರಿಸಿರುವುದು ಅಪರಾಧ,’ ಎಂದು ಹೇಳಿರುವ ರಾಹುಲ್, ಲಲಿತ್ ಮೋದಿಯಿಂದ ಅವರ ಬ್ಯಾಂಕ್ ಅಕೌಂಟ್‌ಗೆ ‘ಎಷ್ಟು ಹಣ ಸಂದಾಯವಾಗಿದೆ’ ಎಂಬುದನ್ನು ಬಹಿರಂಗಗೊಳಿಸಲಿ,’ ಎಂದು ಆಗ್ರಹಿಸಿದ್ದಾರೆ.
‘ಸುಗಮ ಕಲಾಪಕ್ಕೆ ಅನುವು ಮಾಡಿಕೊಡಬೇಕೆಂಬುದು ನಮಗೂ ಗೊತ್ತು. ಆದರೆ ನಾವು ಮೂಲ ವಿಷಯವನ್ನು ಎತ್ತಿದ್ದೇವೆ. ನಾವು ಈಗಾಗಲೇ ಈ ಬಗ್ಗೆ ಹೇಳಿಯಾಗಿದೆ. ನಾನೂ ಈ ವಿಷಯವಾಗಿ ಮೂರು ಬಾರಿ ಪ್ರಸ್ತಾಪಿಸಿದ್ದು, ಸುಷ್ಮಾ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಮುಖ್ಯಮಂತ್ರಿಗಳು ಅಕ್ರಮ ವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಕೊಲೆಗಳು ಸಂಭವಿಸುತ್ತಿವೆ. ಆದರೂ, ನಮ್ಮ ಪ್ರಧಾನಿಗೆ ಮಾತ್ರ ಈ ಬಗ್ಗೆ ಮಾತನಾಡುವ ಅವಶ್ಯಕತೆ ಕಾಣುತ್ತಿಲ್ಲ,’ ಎಂದು ಕುಟುಕಿದ್ದಾರೆ.
‘ಮಧ್ಯಪ್ರದೇಶ ಮುಖ್ಯಮಂತ್ರಿಯನ್ನು ಹೊಗಳುವ ಪ್ರಧಾನಿಗೆ ಅವರಿಂದಲೇ ಸಾವಿರಾರು ಜನರಿಗೆ ಭವಿಷ್ಯವೇ ಇಲ್ಲವಾಗಿದೆ. ಅಲ್ಲದೇ ಒಬ್ಬ ಅಪರಾಧಿಯೊಂದಿಗೆ ರಾಜಸ್ಥಾನ ಮುಖ್ಯಮಂತ್ರಿ ವ್ಯವಹಾರ ಇಟ್ಟುಕೊಂಡಿರುವುದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ,’ ಎಂದು ಆರೋಪಿಸಿರುವ ರಾಹುಲ್ ಕಾಂಗ್ರೆಸ್ ಪ್ರತಿಭಟನೆಯನ್ನು ಮುಂದುವರಿಸಲಿದ್ದು, ಸದನದಲ್ಲಿ ಗದ್ದಲ ಮುಂದುವರಿಯಲಿದೆ ಎಂಬ ಸೂಚನೆ ನೀಡಿದ್ದಾರೆ.