ನವದೆಹಲಿ: ಹಣ ದುರ್ಬಳಕೆ ಆರೋಪ ಎದುರಿಸುತ್ತಿರುವ ಲಲಿತ್ ಮೋದಿಗೆ ಸಹಾಯ ಮಾಡಿದ ಆರೋಪಕ್ಕೆ ತುತ್ತಾಗಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇಂದು ಲೋಕಸಭೆಯಲ್ಲಿ ಸ್ಪಷ್ಟನೇ ನೀಡಿದ್ದಾರೆ.
ನಾನು ಯಾವುದೇ ತಪ್ಪು ಮಾಡಿಲ್ಲ. ವಿಪಕ್ಷದಲ್ಲಿರುವ ನನ್ನ ಆಪ್ತರೆ ನನ್ನ ಮೇಲೆ ಆರೋಪ ಮಾಡುತ್ತಿರುವುದು ದುರದೃಷ್ಟಕರ, ಇದು ನನ್ನ ಕೆಟ್ಟ ದಿನಗಳು ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
ಎರಡೂ ಸದನಗಳಿಗೂ ಹೋಗಿ ನಾನು ಉತ್ತರಿಸಲು ಪ್ರಯತ್ನಿಸಿದ್ದೇನೆ, ಆದರೆ ಸ್ಪಷ್ಟನೆ ನೀಡಲು ನನಗೆ ಅವಕಾಶವೇ ಸಿಗಲಿಲ್ಲ. ಲಲಿತ್ ಮೋದಿಗೆ ಯಾವುದೇ ರೀತಿ ಸಹಾಯಮಾಡಿಲ್ಲ. ನನ್ನ ಮೇಲೆ ಮಾಡಿರುವ ಆರೋಪ ತಪ್ಪಾಗಿದ್ದು, ಸತ್ಯಕ್ಕೆ ದೂರವಾಗಿದೆ. ಲಲಿತ್ ಮೋದಿಗೆ ವೀಸಾ ನೀಡುವಂತೆ ನಾನು ಬ್ರಿಟಿಷ್ ಸರ್ಕಾರಕ್ಕೆ ಶಿಪಾರಸು ಮಾಡಿಲ್ಲ. ನನ್ನ ಆಫೀಸಿನಿಂದ ಇಂಗ್ಲೆಂಡ್ ಸರ್ಕಾರಕ್ಕೆ ಒಂದೇ, ಒಂದು ಮನವಿಯೂ ಹೋಗಿಲ್ಲ. ಲಲಿತ್ ಮೋದಿಗೆ ಸಂಬಂಧಿಸಿದಂತೆ ಬ್ರಿಟಿಷ್ ಸರ್ಕಾರ ತಾನೇ ನಿರ್ಧಾರ ಕೈಗೊಂಡಿದೆ ಎಂದು ಸ್ಪಷ್ಟನೇ ನೀಡಿದ್ದಾರೆ.
ಲಲಿತ್ ಮೋದಿ ಪತ್ನಿ 17 ವರ್ಷದಿಂದ ಕ್ಯಾನ್ಸರ್ ನಿಂದ ಬಳುತ್ತಿದ್ದಾರೆ. ಪೋರ್ಚುಗಲ್ ನಲ್ಲಿ ಲಲಿತ್ ಮೋದಿ ಪತ್ನಿಗೆ ಚಿಕಿತ್ಸೆ ನೀಡಲಾಗುತಿತ್ತು, ಈ ಹಿನ್ನಲೆಯಲ್ಲಿ ಲಲಿತ್ ಮೋದಿ ಅವರ ಪತ್ನಿಯೊಂದಿಗೆ ಇರುವುದು ಅತ್ಯವಶ್ಯಕವಾಗಿತ್ತು. ಹೀಗಾಗಿ, ಬ್ರಿಟಿಷ್ ಸರ್ಕಾರವೇ ಕಾಗದ ಪತ್ರಗಳನ್ನ ನೀಡಿದೆ. ಆದರೆ, ವಿಪಕ್ಷಗಳಿಗೆ ನನ್ನ ಹೇಳಿಕೆಯನ್ನು ಕೇಳುವ ಮನಸ್ಸೇ ಇಲ್ಲ ಎಂದಿದ್ದಾರೆ.
ನನ್ನನ್ನ ಗೌರವಿಸುವವರೇ ನನ್ನ ರಾಜಿನಾಮೆಯನ್ನ ಏಕೆ ಕೇಳುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ನಾನು ಲಲಿತ್ ಮೋದಿ ಅವರಿಗೆ ವೀಸಾ ನೀಡುವಂತೆ ಶಿಫಾರಸು ಮಾಡಿರುವ ಬಗ್ಗೆ ಯಾವುದಾದರೂ ಸಾಕ್ಷಿಗಳನ್ನು ವಿಪಕ್ಷಗಳು ತೋರಿಸಲಿ ಎಂದು ಸವಾಲು ಹಾಕಿದರು.
ಒಬ್ಬ ಮಹಿಳೆಗೆ ಸಹಾಯ ಮಾಡಿದ್ದ ಅಪರಾಧವಾದರೆ, ಅಂತಹ 1000 ಅಪರಾಧ ಮಾಡುತ್ತೇನೆ. ನಾನು ಮಹಿಳೆಗೆ ಸಹಾಯ ಮಾಡಿದ್ದೇನೆ, ಅವರ ಪತಿಗಲ್ಲ. ಇದು ನನ್ನ ಕೆಟ್ಟ ದಿನಗಳು, ಇವು ಆದಷ್ಟು ಬೇಗ ಕಳೆಯುತ್ತವೆ ಎಂದ ಅವರು ನಾನು ಮಾಡಿರುವ ತಪ್ಪೇನೆಂದು ಕೇಳಲು ಬಯಸುತ್ತೇನೆ ಎಂದ ಅವರು ನನ್ನ ಸ್ಥಾನದಲ್ಲಿ ಸೋನಿಯಾ ಗಾಂಧಿ ಇದ್ದಿದ್ದರೆ ಏನು ಮಾಡ್ತಾ ಇದ್ರು? ಎಂದು ಪ್ರಶ್ನಿಸಿದ್ದಾರೆ.