ಅಂತರಾಷ್ಟ್ರೀಯ

ಪಾಕಿಸ್ತಾನದಲ್ಲೊಂದು ಅಸಲಿ ‘ಭಾಯಿಜಾನ್’; ಭಾರತದ ಮುನ್ನಿಗೆ ತವರು ತಲುಪಲು ಕೈಗೂಡದ ಅದೃಷ್ಟ ! ಫೇಸ್‍ಬುಕ್‍ನಲ್ಲಿ ಅಭಿಯಾನ ಆರಂಭಿಸಿ, ಹೆತ್ತವರನ್ನು ಹುಡುಕು ಪ್ರಯತ್ನ

Pinterest LinkedIn Tumblr

Geetha111

ಹೊಸದಿಲ್ಲಿ: ಭಾರತದಲ್ಲಿ ಕಳೆದುಹೋಗುವ ಪಾಕ್‌ನ ಮೂಕ ಬಾಲಕಿಯನ್ನು ನಾಯಕ ಪಾಸ್‌ಪೋರ್ಟ್ ಗೊಡವೆ ಇಲ್ಲದೇ ಸಾಹಸದ ಮೂಲಕ ಆಕೆಯನ್ನು ತವರಿ ಬಿಟ್ಟುಬರುವ ಕಥೆ ಹೊಂದಿರುವ ನಟ ಸಲ್ಮಾನ್ ಖಾನ್ ಅಭಿನಯಿಸಿರುವ ‘ಬಜರಂಗಿ ಭಾಯಿಜಾನ್’ ಚಿತ್ರ ವಿಶ್ವದಾದ್ಯಂತ ಸದ್ದು ಮಾಡಿದೆ. ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಬಾಚುವತ್ತ ಹೊರಟಿದೆ. ಆದರೆ, ಇದಕ್ಕೆ ವ್ಯತಿರಿಕ್ತ ಎಂಬಂತೆ, ಪಾಕಿಸ್ತಾನದಲ್ಲಿ ಸಿಲುಕಿರುವ ಅಸಲಿ ಮುನ್ನಿಗೆ (ಸಿನಿಮಾದಲ್ಲಿ ಬರುವ ಮೂಕ ಬಾಲಕಿ) ಭಾರತದಲ್ಲಿರುವ ತನ್ನ ತವರು ತಲುಪಲು ಇನ್ನೂ ಸಾಧ್ಯವಾಗಿಲ್ಲ. ನಂಬಲು ಸ್ವಲ್ಪ ಕಷ್ಟವಾದರೂ ಇದು ಸತ್ಯ.

geetha

ಪಾಕ್‌ನ ಸೇವಾ ಸಂಸ್ಥೆಯೊಂದರಲ್ಲಿರುವ ಮೂಕ ಯುವತಿ ಭಾರತೀಯಳಾಗಿದ್ದರೂ ಆಕೆಗೆ ತವರು ತಲುಪುವ ಅದೃಷ್ಟ ಇನ್ನೂ ಕೈಗೂಡಿಲ್ಲ. ಈಕೆಯ ಪಾಲನೆ ಪೋಷಣೆಯ ಜವಾಬ್ದಾರಿ ವಹಿಸಿಕೊಂಡಿರುವ ಕರಾಚಿಯ ‘ಈದಿ ಚಾರಿಟಿ’ಯ ಮುಖ್ಯಸ್ಥ ಬಿಲ್ಕೀ ಈದಿ ಈಕೆಗೆ ಪ್ರೀತಿಯಿಂದ ‘ಗೀತಾ’ಎಂದು ಹೆಸರಿಟ್ಟಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಪಾಕ್‌ನಲ್ಲೇ ಇರುವ 22ರ ಹರೆಯದ ಗೀತಾಳಿಗೆ ಮಾತು ಬಾರದ ಕಾರಣ ತನ್ನ ಹೆಸರನ್ನಾಗಲೀ, ವಿಳಾಸವನ್ನಾಗಲೀ ತಿಳಿಸಲು ಸಾಧ್ಯವಾಗಿಲ್ಲ. ವಿಶೆಷವೆಂದರೆ 2012ರಲ್ಲಿ ಈಕೆಯನ್ನು ಭಾರತಕ್ಕೆ ತಲುಪಿಸುವ ಸಲುವಾಗಿ ಅಸಲಿ ಭಾಯಿಜಾನ್ ಬಿಲ್ಕೀ ಅವರು ಭಾರತಕ್ಕೆ ಬಂದಿದ್ದರು. ಈಕೆಯ ಫೋಟೊ ಹಾಗೂ ಸಿಕ್ಕಿದ ಸ್ಥಳವನ್ನು ಪೊಲೀಸರಿಗೆ ತಿಳಿಸಿ ಗೀತಾಳನ್ನು ತವರಿಗೆ ತಲುಪಿಸುವ ಪ್ರಯತ್ನ ಮಾಡಿದರು. ಆದರೂ, ಅವರು ಅಂದುಕೊಂಡ ಕೆಲಸ ಇದುವರೆಗೂ ಸಾಧ್ಯವಾಗಿಲ್ಲ.

geetha12

”ಹದಿನೈದು ವರ್ಷಗಳ ಹಿಂದೆ ರೈಲಿನ ಮೂಲಕ ಲಾಹೋರ್ ತಲುಪಿದ್ದ ಗೀತಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮಾತು ಬಾರದ ಕಾರಣ ಈಕೆಯನ್ನು ಬಾಲ ಮಂದಿರವೊಂದರಲ್ಲಿ ಇರಿಸಲಾಗಿತ್ತು. ಆದರೆ, ಆಕೆ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಬಹಳ ಸಾರಿ ಪ್ರಯತ್ನ ಮಾಡಿದ್ದಳು. ಇದರಿಂದ ಬೇಸತ್ತಿದ್ದ ಅಲ್ಲಿನ ಸಿಬ್ಬಂದಿ ಗೀತಾಳನ್ನು ನಮ್ಮ ಸಂಸ್ಥೆಗೆ ಒಪ್ಪಿಸಿದರು. ಸಂಸ್ಥೆಯ ವಾತಾವರಣಕ್ಕೆ ಅವಳು ಒಗ್ಗದ ಕಾರಣ ನಮ್ಮ ಮನೆಯಲ್ಲಿ ಸಾಕುತ್ತಿದ್ದೇವೆ,” ಎಂದು ಬಿಲ್ಕೀ ತಿಳಿಸಿದ್ದಾರೆ.

geetha1

ಬರವಣಿಗೆ ಮೂಲಕ ಸಂವಹನ: ”ಈಕೆ ಹಿಂದಿಯಲ್ಲಿ ಏನೇನೋ ಬರೆದು ತೋರಿಸುತ್ತಾಳೆ. ಅದು ಇಲ್ಲಿ ಯಾರಿಗೂ ಅರ್ಥವಾಗುವುದಿಲ್ಲ. ಅದೂ ಅಲ್ಲದೆ ಕೈ ಸನ್ನೆ ಮೂಲಕ ತಾನು ತನ್ನ ಮನೆಗೆ ಹೋಗಬೇಕೆಂದು ಹೇಳುತ್ತಾಳೆ. ಒಮ್ಮೊಮ್ಮೆ ದೇವರನ್ನು ಪ್ರಾರ್ಥಿಸುವಾಗ ಅತ್ತುಬಿಡುತ್ತಾಳೆ. ಆಕೆ ತನ್ನ ದುಪಟ್ಟಾದಿಂದ ತಲೆ ಮುಚ್ಚಿಕೊಳ್ಳುವುದನ್ನು ನೋಡಿದರೆ ಪಂಜಾಬ್‌ನ ಯಾವುದೋ ಹಳ್ಳಿಯ ಸಂಪ್ರದಾಯಸ್ತ ಕುಟುಂಬದ ಹುಡುಗಿ ಇರಬಹುದು,” ಎಂದು ಬಿಲ್ಕಿ ಅಭಿಪ್ರಾಯಪಡುತ್ತಾರೆ. ಕರಾಚಿಯಲ್ಲಿರುವ ಗೀತಾ ಇತ್ತೀಚೆಗೆ ರಂಜಾನ್ ಆಚರಿಸಿದ್ದಳು. ಹಿಂದೂ ದೇವರುಗಳ ಜತೆಯಲ್ಲಿ ಆಕೆ ಅಲ್ಲಾನನ್ನೂ ಪ್ರಾರ್ಥಿಸಲು ಶುರು ಮಾಡಿದ್ದಾಳೆ. ತಾನು ತನ್ನ ಮನೆಯವರನ್ನು ಮತ್ತೆ ಸೇರಬೇಕೆಂಬುದೇ ಆಕೆಯ ಕೋರಿಕೆಯಾಗಿದೆ.

ತನ್ನ ಬಗ್ಗೆ ಏನ್ ಹೇಳ್ತಾಳೆ?: ಮೊಬೈಲ್‍ನಲ್ಲಿ ಭಾರತದ ಮ್ಯಾಪ್ ನೋಡಿ ತನ್ನ ದೇಶ ಇದು ಎಂದು ಗುರುತಿಸಿರುವ ಈ ಗೀತಾಗೆ ಬೇರೆ ಯಾವುದೇ ಮಾಹಿತಿ ನೆನಪಿಲ್ಲ. ಒಮ್ಮೆ ಮ್ಯಾಪ್‍ನಲ್ಲಿ ಜಾರ್ಖಾಂಡ್ ಗುರುತಿಸುವ ಗೀತಾ ಮತ್ತೊಮ್ಮೆ ತೆಲಂಗಾಣವನ್ನು ತೋರಿಸುತ್ತಿದ್ದಾಳೆ. ಮುಖ, ಹಾಗೂ ಕೈ ಬೆರಳಿನಲ್ಲಿ 7 ಅಣ್ಣಂದಿರು ಹಾಗೂ 4 ಸಹೋದರಿಯರು ಇದ್ದಾರೆ ಎಂದು ಹೇಳುತ್ತಿದ್ದಾಳೆ. ಮೂಕಿಯಾದ ಕಾರಣ ಆಕೆಗೆ ಹಿಂದಿಯಲ್ಲಿ ಬರೆದು ಪ್ರಶ್ನೆ ಕೇಳಿದರೂ ಉತ್ತರ ಸಿಗುತ್ತಿಲ್ಲ. ಕಳೆದ ವರ್ಷ ಭಾರತದ ಅಧಿಕಾರಿಗಳು ಬಂದು ಈಕೆಯ ಫೋಟೋ ತೆಗೆದುಕೊಂಡು ಮಾಹಿತಿಯನ್ನು ಸಂಗ್ರಹಿಸಿಕೊಂಡು ಹೋದವರು ಮತ್ತೆ ವಾಪಸ್ಸಾಗಿಲ್ಲ. ಹೀಗಾಗಿ ಸಂಸ್ಥೆ ಗೀತಾಳನ್ನು ಪಾಕಿಸ್ತಾನದಲ್ಲಿರುವ ಹಿಂದೂ ಯುವಕನ ಜೊತೆ ಮದುವೆ ಮಾಡುವ ಬಗ್ಗೆ ತೀರ್ಮಾನಿಸಿತ್ತು. ಆದರೆ ಹೆತ್ತವರು ಸಿಗುವವರೆಗೂ ಮದುವೆ ಆಗುವುದಿಲ್ಲ ಎಂದು ಗೀತಾ ಹಠ ಹಿಡಿದು ಕುಳಿತಿದ್ದಾಳೆ.

ಪ್ರತ್ಯೇಕ ಕೊಠಡಿ: ಹಿಂದೂ ಹುಡುಗಿಯಾಗಿರುವ ಕಾರಣ ಈಕೆಗೆ ಸಂಸ್ಥೆಯವರು ಪ್ರತ್ಯೇಕ ಕೊಠಡಿ ನೀಡಿ ದೇವರ ಪ್ರಾರ್ಥನೆಗೆ ಅನುವು ಮಾಡಿಕೊಟ್ಟಿದ್ದಾರೆ. ಆಕೆಗೆ ನೇಪಾಳದಿಂದ ಗಣೇಶನ ಮೂರ್ತಿ, ಇನ್ನಿತರ ದೇವರ ಚಿತ್ರವನ್ನು ತಂದು ಸಂಸ್ಥೆಯವರೇ ಪೂಜೆಗೆ ತಂದು ಕೊಟ್ಟಿದ್ದಾರೆ. ಮಾನವೀಯತೆ ನೆಲೆಯಲ್ಲಿ ಪಾಕಿಸ್ತಾನ ಈಕೆಯನ್ನು ನಡೆಸಿಕೊಂಡಿದೆ. ಈಗ ಭಜರಂಗಿ ಭಾಯಿಜಾನ್ ಸಿನಿಮಾ ಯಶಸ್ಸಿನ ಬಳಿಕ ಗೀತಾಳ ಬಗ್ಗೆ ಫೇಸ್‍ಬುಕ್‍ನಲ್ಲಿ ಅಭಿಯಾನ ಆರಂಭಿಸಿ, ಹೆತ್ತವರನ್ನು ಹುಡುಕು ಪ್ರಯತ್ನ ಸಾಗಿದೆ.

Write A Comment