ಇಂದೋರ್: ಅನೇಕ ನಿಗೂಢ ಸಾವಿಗೆ ಕಾರಣವಾದ, ಬಹುಕೋಟಿ ಪ್ರವೇಶ ಮತ್ತು ನೇಮಕಾತಿ ಹಗರಣದ ಚೊಚ್ಚಲೆಚ್ಚರಿಗರಲ್ಲಿ ಒಬ್ಬರಾದ ಪ್ರಶಾಂತ್ ಪಾಂಡೆ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ‘ಹವಾಲಾ’ ಹಣ ಎಂದು ಹೇಳಲಾದ ಸುಮಾರು 9.96 ಲಕ್ಷ ಹಣವನ್ನು ಅವರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
‘ಖಾಸಗಿ ಕಂಪನಿ ಲಕ್ಷ್ಮಿ ಮೋಟಾರ್ಸ್ನಲ್ಲಿ ವ್ಯವಹರಿಸುವ ಹವಾಲಾ ಹಣ ಇರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪಾಂಡೆ ಪತ್ನಿ ಮೇಘನಾ ಪಾಂಡೆಯನ್ನು ಬಂಧಿಸಲಾಗಿದೆ. ಈ ಕಂಪನಿಯಲ್ಲಿ ಮೇಘನಾ ಎಚ್ಆರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೇಘನಾ ಮೇಲೆ ಕಣ್ಣಿಟ್ಟ ಪೊಲೀಸರು ಹಣದ ಬ್ಯಾಗ್ನೊಂದಿಗೆ ಕಂಪನಿ ಆಫೀಸ್ನಿಂದ ಹೊರ ಬಹಲು ಸೂಚಿಸಿದ್ದರು,’ ಎಂದು ಎಸ್ಪಿ ಒ.ಪಿ.ತ್ರಿಪತಿ ಹೇಳಿದ್ದಾರೆ.
ಸರಕಾರದಿಂದ ಕಿರುಕುಳ: ‘ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ, ರಾಜ್ಯ ಸರಕಾರ ವಿನಾಕಾರಣ ನಮಗೆ ಕಿರುಕುಳ ನೀಡುತ್ತಿದೆ,’ ಎಂದು ಪಾಂಡೇ ಆರೋಪಿಸಿದ್ದಾರೆ.
‘ನಾವು ಬಾಡಿಗೆ ಫ್ಲ್ಯಾಟ್ವೊಂದರಲ್ಲಿ ವಾಸಿಸುತ್ತಿದ್ದು, ಸ್ವಂತ ಫ್ಲ್ಯಾಟ್ ಬುಕ್ ಮಾಡಲು ಬ್ಯುಲ್ಡರ್ಗೆ 10 ಲಕ್ಷ ರೂ. ನೀಡಬೇಕಾಗಿತ್ತು. ನಾವು 10 ವರ್ಷಗಳಿಂದಲೂ ಕಷ್ಟಪಟ್ಟು ದುಡಿಯುತ್ತಿದ್ದವೆ. ಆದಾಯ ತೆರಿಗೆ ರಿಟರ್ನ್ಸ್ನಲ್ಲಿ ಎಲ್ಲವನ್ನೂ ನಮೂದಿಸುತ್ತೇವೆ,’ ಎಂದು ಪಾಂಡೆ ಹೇಳಿ ಕೊಂಡಿದ್ದಾರೆ. ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಪಾಂಡೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
