ಹೊಸದಿಲ್ಲಿ: ಮುಂಬಯಿ ಸರಣಿ ಸ್ಫೋಟ ಪ್ರಕರಣದ ದೋಷಿ ಯಾಕೂಬ್ ಮೆಮೊನ್ ಗಲ್ಲಿಗೆ ವಿರೋಧ ವ್ಯಕ್ತಪಡಿಸಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.
1993 ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ತಲೆಮರೆಸಿಕೊಂಡಿರುವ ಟೈಗರ್ ಮೊಮೊನ್ ವಿರುದ್ಧ ಸಲ್ಮಾನ್ ಸರಣಿ ಟ್ವೀಟ್‌ಗಳಲ್ಲಿ ಹರಿಹಾಯ್ದಿದ್ದಾರೆ.
ಪ್ರಕರಣದಲ್ಲಿ ಆತನ ಸೋದರ ಪ್ರಮುಖ ಆರೋಪಿಯಾಗಿರುವಾಗ ಯಾಕೂಬ್‌ಗೆ ಮರಣದಂಡನೆ ವಿಧಿಸಿರುವುದು ಅನ್ಯಾಯ. ಇದ್ದರೆ ಟೈಗರ್‌ನಂಥ ಸೋದರ ಇರಬೇಕು ಎಂದು ಕುಹಕವಾಡಿದ್ದಾರೆ.
ಕಳೆದ ಮೂರು ದಿನಗಳಿಂದ ಈ ಬಗ್ಗೆ ಬರೆಯಲು ಇಚ್ಛಿಸಿದ್ದೇ ಆದರೆ, ನನ್ನೊಳಗೆ ಭಯ ಕಾಡುತ್ತಿತ್ತು. ಹಾಗಾಗಿ, ಈಗ ಅಂತಿಮವಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೇನೆ ಎಂದು ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ.
ಟ್ವೀಟರ್ ನಲ್ಲಿ ಸಲ್ಮಾನ್ ಬರೆದುಕೊಂಡಿದ್ದು ಹೀಗೆ…
ಕಳೆದ ಮೂರು ದಿನಗಳಿಂದ ಈ ರೀತಿ ಟ್ವೀಟ್ ಬರೆಯಲು ಇಚ್ಛಿಸಿದ್ದೆ. ಆದರೆ ಟ್ವೀಟ್ ಮಾಡಲು ಭಯ ಕಾಡುತ್ತಿತ್ತು. ಆದರೆ ಆತನನ್ನ ನಂಬಿಕೊಂಡು ಆತನ ಕುಟುಂಬವಿದೆ. ಸಹೋದರನನ್ನ ಗಲ್ಲಿಗೇರಿಸಬೇಡಿ, ತಲೆ ತಪ್ಪಿಸಿಕೊಂಡಿರುವ ಟೈಗರ್ ಮೆಮನ್ ನನ್ನ ಗಲ್ಲಿಗೇರಿಸಿ ಎಂದು ಟ್ವೀಟ್ ಮಾಡಿದ್ದಾರೆ.
ನಾಗ್ಪುರದ ಜೈಲಿನಲ್ಲಿ ಜುಲೈ 30ರಂದು ಬೆಳಗ್ಗೆ 7 ಗಂಟೆ ಯಾಕೂಬ್ ಮೆಮೊನ್‌ನನ್ನು ಗಲ್ಲಿಗೇರಿಸಬೇಕು ಎಂದು ವಿಶೇಷ ನ್ಯಾಯಾಲಯ ಏಪ್ರಿಲ್ 29 ರಂದು ಆದೇಶ ಹೊರಡಿಸಿತ್ತು.
ಗಲ್ಲು ಬಹುತೇಕ ಖಚಿತ :
ಈ ಸಂಬಂಧ ಯಾಕೂಬ್ ಸಲ್ಲಿಸಿದ್ದ ಕ್ಯೂರೇಟೀವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಜುಲೈ 21ರಂದು ತಿರಸ್ಕರಿಸಿತ್ತು. ಶಿಕ್ಷೆ ಜಾರಿಗೆ ತಡೆ ಕೋರಿ ಯಾಕೂಬ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ಅಂಗೀಕರಿಸಿದೆಯಾದರೂ, ತಡೆಯಾಜ್ಞೆ ನೀಡಿಲ್ಲ. ಇದರಿಂದಾಗಿ ಯಾಕೂಬ್ ಗಲ್ಲಿಗೇರುವುದು ಬಹುತೇಕ ಖಚಿತ ಎಂದು ಮೂಲಗಳು ಹೇಳಿವೆ. ಇನ್ನು ಈ ಬಗ್ಗೆ ಸರಕಾರದ ನಿರ್ಧಾರವನ್ನು ಪ್ರಕಟಿಸಲು ನಿರಾಕರಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಜುಲೈ 29ಕ್ಕೆ ಹೇಳಿಕೆ ನೀಡವುದಾಗಿ ತಿಳಿಸಿರುವುದು ಗಮನಾರ್ಹ.
