ಮಂಗಳೂರು : ಶಿರಾಡಿ ಘಾಟಿ ರಸ್ತೆಯ ಹೆಗ್ಗದ್ದೆಯಿಂದ ಕೆಂಪುಹೊಳೆವರೆಗಿನ 11.77 ಕಿ.ಮೀ. ಉದ್ದದ ಹೆದ್ದಾರಿ ಕಾಂಕ್ರಿಟೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶಿರಾಡಿ ಘಾಟಿ ರಸ್ತೆ ಒಂದು ವಾರದೊಳಗಾಗಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಲೋಕೋಪಯೋಗಿ ಸಚಿವ ಮಹದೇವಪ್ಪ ಹೇಳಿದರು.
ಹಾಸನದಿಂದ ಬಿ.ಸಿ.ರೋಡ್ವರೆಗಿನ ರಸ್ತೆಯು ರಾಷ್ಟ್ರೀಯ ಹೆದ್ದಾರಿ ವಲಯ ಬೆಂಗಳೂರು ಇದರ ಉಸ್ತುವಾರಿಯಲ್ಲಿದ್ದು, ಈ ವ್ಯಾಪ್ತಿಯಲ್ಲಿ ಬರುವ ಶಿರಾಡಿ ಘಾಟಿ ಪ್ರದೇಶದ ಕಾಂಕ್ರಿಟೀಕರಣ ಈಗಾಗಲೇ ಪೂರ್ಣಗೊಂಡು ಕ್ಯೂರಿಂಗ್ ಹಂತದಲ್ಲಿರುವುದನ್ನು ಶನಿವಾರ ಸಚಿವ ಮಹದೇವಪ್ಪ, ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ ಮತ್ತು ಅಧಿಕಾರಿಗಳು ಪರಿಶೀಲಿಸಿದರು.
ಈ ಸಂದರ್ಭ ಗುಂಡ್ಯ ಫಾರೆಸ್ಟ್ ಹಾಲ್ನಲ್ಲಿ ನಡೆದ ಮಾಧ್ಯಮ ಸಭೆಯಲ್ಲಿ ಮಾತನಾಡಿದ ಮಹದೇವಪ್ಪ ಅವರು, ಈ ಕಾಮಗಾರಿ ಈ ಹಿಂದೆ ಕೇಂದ್ರದಲ್ಲಿ ಯುಪಿಎ ಆಡಳಿತಾವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರು ಬಿಡುಗಡೆ ಮಾಡಿದ್ದ ಅನುದಾನದಲ್ಲಿ ಕಾಮಗಾರಿ ಈವರೆಗೆ ನಡೆದಿದ್ದು, ಈ ಘಾಟಿ ಪ್ರದೇಶದಲ್ಲಿ ದಶಕಗಳಿಂದಲೂ ಹಿಂದಿನಿಂದಲೂ ರಸ್ತೆ ವರ್ಷ ಪೂರ್ತಿ ಕೆಡುತ್ತಿದ್ದುದನ್ನು ಮನಗಂಡು ಮುಂದಿನ 50 ವರ್ಷಗಳ ಕಾಲವಾದರೂ ನಿರ್ಭೀತಿಯಿಂದ ಈ ಹೆದ್ದಾರಿ ಸಂಚಾರಕ್ಕೆ ಅನುವಾಗಬೇಕೆಂಬ ಕಾಳಜಿಯಿಂದ ಸಂಪೂರ್ಣ ಕಾಂಕ್ರಿಟೀಕರಣಗೊಳಿಸಲಾಗಿದೆ. ನಿಗದಿತ ಅವಧಿಗಿಂತ ಮೊದಲೇ ಈ ಕಾಮಗಾರಿ ಅತ್ಯಂತ ಒಳ್ಳೆಯ ಗುಣಮಟ್ಟದಲ್ಲಿ ನಡೆದಿರುವ ಬಗ್ಗೆ ಸಂಬಂಧ ಪಟ್ಟ ಇಲಾಖೆಯಿಂದಲೂ ಮಾನ್ಯತೆ ಪಡೆದಿದೆ. ರಸ್ತೆ ಕಾಮಗಾರಿ ಪೂರ್ತಿ ಈಗಾಗಲೇ ಮುಗಿದಿದ್ದರೂ ಕ್ಯೂರಿಂಗ್ ಮತ್ತು ರಸ್ತೆಯ ಅಂಚಿನಲ್ಲಿ ಕಲ್ಲುಮಿಶ್ರಿತ ಮಣ್ಣನ್ನು ತುಂಬಿಸುವುದು ಮತ್ತು ತಡೆಗೋಡೆ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ವಾರದೊಳಗೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.
ಶಿಶಿಲ-ಭೈರಾಪುರ ರಸ್ತೆ ಬಗ್ಗೆ ಒಲವು: ಮುಂದಿನ ಎರಡನೇ ಹಂತದ ಕಾಮಗಾರಿ ವೇಳೆಯೂ ಮತ್ತೆ ಕೆಲವು ತಿಂಗಳುಗಳ ಕಾಲ ಹೆದ್ದಾರಿಯನ್ನು ಸಂಚಾರ ತಡೆಗೊಳಿಸುವ ಅಗತ್ಯತೆ ಇದ್ದು, ಮುಂದಿನ ಹಲವಾರು ವರ್ಷ ಸುಗಮ ಸಂಚಾರದ ದೃಷ್ಟಿಯಿಂದ ಸಾರ್ವಜನಿಕರು ಈ ಬಗ್ಗೆ ಸಹಕರಿಸುವುದು ಅಗತ್ಯ ಎಂದರು. ವಿಕ ಪತ್ರಿಕೆಯಲ್ಲಿ ಈ ಹಿಂದೆ ಬಂದ ಶಿಶಿಲ ಭೈರಾಪುರ ಉದ್ದೇಶಿತ ರಸ್ತೆಯ ವಿಷಯ ಸದನದಲ್ಲಿ ಈಗಾಗಲೇ ಚರ್ಚೆಯಾಗಿದ್ದು, ಶಿರಾಡಿ ಮತ್ತು ಚಾರ್ಮಾಡಿ ಘಾಟಿಗಳಿಗೆ ಪರ್ಯಾಯವಾಗಿ ಈ ರಸ್ತೆಯ ವಿಚಾರವನ್ನು ಮಾಧ್ಯಮ ಪ್ರತಿನಿಧಿಗಳು ಸಚಿವರಲ್ಲಿ ವಿಚಾರಿಸಿದರು. ಈ ಬಗ್ಗೆ ಉತ್ತರಿಸಿದ ಅವರು ವಿಕ ಪತ್ರಿಕೆಯಲ್ಲಿ ಬಂದಿರುವ ಈ ಹೊಸ ಮಾರ್ಗದ ಬಗ್ಗೆ ಈಗಾಗಲೇ ಸರಕಾರಕ್ಕೆ ವರದಿಗಳನ್ನು ಸಲ್ಲಿಸಿ ಆಗಿದೆ. ಇನ್ನುಳಿದ ಹೆದ್ದಾರಿಗಳಿಗಿಂತ ಅತಿ ಸನಿಹದಲ್ಲಿ ಬಯಲು ಪ್ರದೇಶಕ್ಕೆ ಸಂಪರ್ಕ ಸಾಧಿಸಬಲ್ಲ ಶಿಶಿಲ ಭೈರಾಪುರ ರಸ್ತೆಗೆ ಅಂದಾಜು 30 ಕೋಟಿ ರೂ. ವೆಚ್ಚವೂ ಬೇಕಾಗಬಹುದೆನ್ನುವ ಬಗ್ಗೆ ಸರಕಾರಕ್ಕೆ ಮಾಹಿತಿ ದೊರೆತಿದೆ. ಮುಂದಿನ ವರ್ಷದಲ್ಲಿ ಈ ಬಗ್ಗೆ ಸರಕಾರದ ಕಡೆಯಿಂದ ವಿಶೇಷ ಗಮನ ನೀಡುವ ಕಾರ್ಯ ನಡೆಸಲಾಗುವುದು ಎಂದು ಭರವಸೆ ನೀಡಿದರು.
