ರಾಷ್ಟ್ರೀಯ

ಒಂದೇ ವೇದಿಕೆಯಲ್ಲಿ ಮೋದಿ, ನಿತೀಶ್‌

Pinterest LinkedIn Tumblr

nitishweb

ಪಾಟ್ನಾ: ಬಹು ನಿರೀಕ್ಷಿತ ಪಾಟ್ನಾ ಐಐಟಿ ಉದ್ಘಾಟನೆ ಸೇರಿದಂತೆ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಹಾರ ಸಿಎಂ ನಿತೀಶ್‌ಕುಮಾರ್‌ ಸ್ವಾಗತಿಸಿದ್ದಾರೆ.

ನಾನು ಮೋದಿ ಅವರನ್ನು ಪ್ರಧಾನಿಯಾಗಿ ಸ್ವಾಗತಿಸುತ್ತೇನೆ, ಬಿಜೆಪಿ ನಾಯಕನನ್ನಾಗಿ ಅಲ್ಲ ಎಂದು ಪ್ರಧಾನಿ ಆಗಮನಕ್ಕೆ ಮುನ್ನವೇ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿಕೆ ನೀಡಿದ್ದರು.

ದೀನದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗೆ ಪಾಟ್ನಾದಲ್ಲಿ ಚಾಲನೆ ನೀಡುವ ಸಮಾರಂಭದಲ್ಲಿ ಇಬ್ಬರೂ ಒಂದೇ ವೇದಿಕೆ ಹಂಚಿಕೊಂಡರು. ದನಿಯಾವ-ಬಿಹಾರ್‌ಶರೀಫ್‌ ರೈಲ್ವೆ ಹಳಿ ಯೋಜನೆಗೆ ಮೋದಿ ಹಸಿರು ನಿಶಾನೆ ತೋರಿದರು. ಅಲ್ಲದೆ ಪಾಟ್ನಾ-ಮುಂಬಯಿ ಎಸಿ ಎಕ್ಸ್‌ಪ್ರೆಸ್‌ ರೈಲಿಗೂ ಹಸಿರು ನಿಶಾನೆ ತೋರಿದರು. ಬಳಿಕ ಪಾಟ್ನಾ ಐಐಟಿ ಉದ್ಘಾಟನೆಯನ್ನೂ ನೆರವೇರಿಸಿದರು. ಜಗದೀಶ್‌ಪುರ-ಹಲ್ದಿಯಾ ಅನಿಲ ಸಾಗಣೆ ಕೊಳವೆ ಮಾರ್ಗಕ್ಕೂ ಚಾಲನೆ ನೀಡಿದರು.

ಮೋದಿಗೆ ಸ್ವಾಗತ:

ಮೊದಲ ಬಾರಿಗೆ ಬಿಹಾರಕ್ಕೆ ಪ್ರಧಾನಿಯಾಗಿ ಆಗಮಿಸಿರುವ ನರೇಂದ್ರ ಮೋದಿಯವರನ್ನು ನಾನು ಸ್ವಾಗತಿಸುತ್ತೇನೆ. ಎಲ್ಲ ಯೋಜನೆಗಳನ್ನು ಉದ್ಘಾಟಿಸಿದ್ದಕ್ಕೂ ಅಭಿನಂದಿಸುತ್ತೇನೆ. ಪಾಟ್ನಾ ಐಐಟಿ ದೇಶಕ್ಕೆ ದೊಡ್ಡ ಕೊಡುಗೆ ನೀಡಲಿದೆ ಎಂದು ಸಿಎಂ ನಿತೀಶ್‌ಕುಮಾರ್‌ ಹೇಳಿದರು.

ನಾನು ಕೇಂದ್ರದಲ್ಲಿ ರೈಲ್ವೆ ಸಚಿವನಾಗಿದ್ದಾಗ ಪ್ರಧಾನಿ ಮುಖ್ಯಮಂತ್ರಿಯಾಗಿದ್ದರು. ನಾನು ಅವರ ರಾಜ್ಯಕ್ಕೆ ರೈಲ್ವೆ ಸಚಿವನಾಗಿ ಅನೇಕ ಸಲ ಭೇಟಿ ನೀಡಿದ್ದೆ. ಮಂದಗತಿಯಲ್ಲಿರುವ ರೈಲ್ವೆ ಯೋಜನೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಬೇಕಿದೆ. ಕೇಂದ್ರದಲ್ಲಿ ಬಾಕಿ ಇರುವ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವ ಕೆಲಸವನ್ನು ಮಾಡಲಾಗುವುದು ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.

ಅಭಿವೃದ್ಧಿಯೇ ಉತ್ತರ:

ನಾನಾ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಮಂತ್ರ ಪಠಿಸಿದರು.

ಎಲ್ಲ ಸಮಸ್ಯೆಗಳಿಗೂ ಅಭಿವೃದ್ಧಿಯೇ ಉತ್ತರ. ದೇಶದ ಅಭಿವೃದ್ಧಿಗೆ ರಾಜ್ಯಗಳ ಅಭಿವೃದ್ಧಿ ಬಹಳ ಅಗತ್ಯ. ರಾಜ್ಯಗಳ ಪ್ರಗತಿಯೊಂದಿಗೆ ದೇಶದ ಪ್ರಗತಿ ಶುರುವಾಗುತ್ತದೆ. ಕೇಂದ್ರ, ರಾಜ್ಯಗಳು ಒಗ್ಗಟ್ಟಾಗಿ ಸಮಾನವಾಗಿ ಕೆಲಸ ಮಾಡಿದರೆ ಅಭಿವೃದ್ಧಿ ದೂರವಿಲ್ಲ ಎಂದು ಹೇಳಿದರು.

ಆದರೆ ರಾಜಕೀಯ ದೇಶದ ಪ್ರಗತಿಗೆ ಅಡ್ಡಗಾಲು ಹಾಕುತ್ತಿದೆ. ನಾನು ನಿತೀಶ್‌ಜಿ ಅವರ ಮಾತನ್ನು ಒಪ್ಪುತ್ತೇನೆ. ರಾಜ್ಯದ ಯೋಜನೆಗಳು ನಿಧಾನವಾಗಿದ್ದು ಸತ್ಯ. ಏಕೆಂದರೆ ಅಟಲ್‌ಜಿ ಸರಕಾರದ ನಂತರ ಕೇಂದ್ರದಲ್ಲಿ ಸರಕಾರವೂ ಬದಲಾಗಿತ್ತು ಎಂದು ಹೆಸರು ಹೇಳದೆ ಯುಪಿಎ ನೇತೃತ್ವದ ಕೇಂದ್ರದಲ್ಲಿ ಆಳಿದ ಹಿಂದಿನ ಸರಕಾರವನ್ನು ಕುಟುಕಿದರು.

ಸ್ವಚ್ಛ ಗಂಗಾ ಯೋಜನೆಯನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಇನ್ನು ಊರ್ಜಾ ಗಂಗಾ ಯೋಜನೆಯನ್ನು ಜಾರಿಗೆ ತರಲಿದ್ದೇವೆ ಎಂದು ಪ್ರಧಾನಿ ಹೇಳಿದರು.

Write A Comment