ರಾಷ್ಟ್ರೀಯ

ಮುಂದುವರೆದ ಚಿನ್ನದ ಕುಸಿತ

Pinterest LinkedIn Tumblr

gold274ನವದೆಹಲಿ: ಸತತ ಮೂರನೆ ದಿನ ಚಿನ್ನದ ಕುಸಿತ ಮುಂದುವರೆದಿದ್ದು ಮಂಗಳವಾರದ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ದರದಲ್ಲಿ ರು.150 ಕುಸಿದು ರು.25,550ಕ್ಕೆ ತಲುಪಿದೆ. ಈ ದರ ದೇಶೀಯ ಮಾರುಕಟ್ಟೆಯಲ್ಲಿ ನಾಲ್ಕು ವರ್ಷಗಳಲ್ಲೇ ಕನಿಷ್ಠವಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲೂ ಸಹ ಸತತ ಒಂಬತ್ತನೇ ದಿನ ಚಿನ್ನದ ದರಗಳು ಕುಸಿತ ದಾಖಲಿಸಿದವು. ಜಾಗತಿಕ ಮಾರುಕಟ್ಟೆಗಳಲ್ಲಿನ ಈ ಬೆಳವಣಿಗೆ ದೇಶೀಯ ಚಿನಿವಾರ ಪೇಟೆ ಮೇಲೆ ಭಾರಿ ಒತ್ತಡ ಹೇರಿದೆ. ಇದೇ ಸಂದರ್ಭದಲ್ಲಿ ಆಭರಣ ತಯಾರಕರು ಖರೀದಿಗೆ ಮುಂದಾಗದಿದ್ದದು ಮತ್ತಷ್ಟು ಕುಸಿತಕ್ಕೆ ಕಾರಣವಾಗಿದೆ. ಆದರೆ ಬೆಳ್ಳಿ ಸ್ವಲ್ಪ ಚೇತರಿಕೆ ದಾಖಲಿಸಿತು.

ಕೈಗಾರಿಕೆಗಳಲ್ಲಿ ಬಳಕೆಗೆ ಬೆಳ್ಳಿ ಖರೀದಿಸಲು ಉದ್ಯಮಿಗಳು ಮುಂದಾಗಿದ್ದರಿಂದ ಕೆಜಿ ದರ ರು.100 ಏರಿಕೆ ಕಂಡು ರು.34,300ಕ್ಕೆ ದಿನದಂತ್ಯ ಕಂಡಿತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವುದು ಮತ್ತು ಅಮೆರಿಕದ ಫೆಡರಲ್ ಬ್ಯಾಂಕ್ ತನ್ನ ಸಾಲಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಡಾಲರ್ ಮೌಲ್ಯದಲ್ಲಿ ಏರಿಕೆ ಕಾಣುತ್ತಿರುವುದು ದರ ಕುಸಿಯಲು ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ ರಿಟೇಲ್ ಹೂಡಿಕೆದಾರರು ಮತ್ತು ಆಭರಣ ತಯಾರಕರು ಖರೀದಿಯಿಂದ ದೂರ ಉಳಿದಿದ್ದರು. ಕಳೆದ ಮೂರು ದಿನ ಗಳಲ್ಲಿ ದರ ರು. 700 ಕುಸಿದಿದೆ.

Write A Comment