ರಾಷ್ಟ್ರೀಯ

ವ್ಯಾಪಂ – ಲಲಿತ್‌ಗೇಟ್ ಹಗರಣಕ್ಕೆ ಎರಡನೇ ದಿನದ ಕಲಾಪವೂ ಬಲಿ; ಪ್ರತಿಪಕ್ಷಗಳ ಗದ್ದಲ, ಕೋಲಾಹಲ

Pinterest LinkedIn Tumblr

lok-sabha

ಹೊಸದಿಲ್ಲಿ: ವ್ಯಾಪಂ ಹಾಗೂ ಲಲಿತ್‌ಗೇಟ್ ಹಗರಣದಲ್ಲಿ ಭಾಗಿಯಾದವರ ಪದಚ್ಯುತಿಗೆ ಒಗ್ಗಟ್ಟಾಗಿ ಪಟ್ಟು ಹಿಡಿದಿರುವ ಪ್ರತಿಪಕ್ಷಗಳ ಗಲಾಟೆಗೆ ಮುಂಗಾರು ಅಧಿವೇಶನದ ಎರಡನೇ ದಿನದ ಕಲಾಪವೂ ಭಗ್ನಗೊಂಡಿದೆ.

ಉಭಯ ಸದನಗಳ ಕಲಾಪ ಮಧ್ಯಾಹ್ನದವರೆಗೆ ಮುಂದೂಡಿ ಮತ್ತೆ ಆರಂಭಗೊಂಡರೂ, ಮತ್ತೆ ಗಲಾಟೆಯೇ ಪ್ರಧಾನವಾಗಿ, ನಾಳೆಗೆ ಮುಂದೂಡಲ್ಪಟ್ಟಿತು.

ಕಾಂಗ್ರೆಸ್ ಪ್ರತಿಭಟನೆ: ಮೊದಲು ತಿಳಿಸಿದಂತೆ ಸಂಸತ್‌ ಭವನದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್‌ ನಾಯಕರು ಪ್ರತಿಭಟಿಸದೇ ಹೋದರೂ, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಂಸದರು ಸಂಸತ್ತಿನ ಒಳಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಸಂಸದರು ಸಭಾಧ್ಯಕ್ಷರ ಪೀಠದ ಎದುರು ಜಮಾಯಿಸಿ, ಲಲಿತ್‌ ಗೇಟ್‌ ಹಗರಣದ ಚರ್ಚೆ ಆಗದ ಹೊರತು ಕಲಾಪಕ್ಕೆ ಅವಕಾಶ ನೀಡದಂತೆ ಆಗ್ರಹಿಸಿದರು. ಭಿತ್ತಿಪತ್ರಗಳೊಂದಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಬಂದ ಕಾಂಗ್ರೆಸ್ ಸಂಸದರನ್ನು, ಸ್ಪೀಕರ್ ಸುಮಿತ್ರಾ ಮಹಾಜನ್ ತರಾಟೆಗೆ ತೆಗೆದುಕೊಂಡು, ಅಶಿಸ್ತು ತೋರಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

‘ಪ್ರಭಾವಿ ಬೆಂಬಲದಿಂದ ಸಣ್ಣ ಮನುಷ್ಯನೂ ಶಕ್ತಿಶಾಲಿಯಾಗುತ್ತಾರೆ,’ ‘ಪ್ರಧಾನಿಯವರೇ ನಿಮ್ಮ ಮೌನ ಮುರಿಯಿರಿ,’ ‘ಮೋದಿಜಿ ಸುಷ್ಮಾ ಹಾಗೂ ರಾಜೆ ಅವರ ರಾಜೀನಾಮೆ ಪಡೆದು, ನಿಮ್ಮ 56 ಇಂಚಿನ ಎದೆ ತೋರಿಸಿ,’ ಎಂಬ ಭಿತ್ರಿ ಪತ್ರಗಳನ್ನು ಕಾಂಗ್ರೆಸ್ ಸದಸ್ಯರು ಪ್ರದರ್ಶಿಸಿದರು.

ಸುಷ್ಮಾ ಟ್ವೀಟ್ ಸ್ಫೋಟಕ: ಲಲಿತ್‌ಗೇಟ್ ವಿಚಾರವಾಗಿ, ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿರುವ ಬೆನ್ನಲ್ಲೇ, ಕಾಂಗ್ರೆಸ್ ವಿರುದ್ಧ ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಎರಡನೇ ದಿನದ ಕಲಾಪಕ್ಕೆ ಸ್ಫೋಟಕ ವಿವರವನ್ನು ಬಹಿರಂಗಗೊಳಿಸಿದ್ದರು. ಕಲ್ಲಿದ್ದಲು ಹಗರಣದ ಆರೋಪಿ ಸಂತೋಷ್‌ ಬರೋಡಿಯಾ ಅವರಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್‌ ನೀಡುವಂತೆ ಕಾಂಗ್ರೆಸ್‌ ನಾಯಕರು ಒತ್ತಾಯಿಸಿದ್ದರು. ಅವರ ಹೆಸರನ್ನು ಸದ್ಯದಲ್ಲೇ ಬಯಲು ಮಾಡುತ್ತೇನೆ ಎಂದು ಸುಷ್ಮಾ ಟ್ವೀಟ್‌ ಮಾಡಿದ್ದರು.

ಸದನದಲ್ಲಿ ಪ್ರಧಾನಿಯ ಮೋದಿಯವರ ಅನುಪಸ್ಥಿತಿಯಲ್ಲಿ ಸುಷ್ಮಾ, ಗೃಹ ಸಚಿವರೊಂದಿಗೆ ಮುಂದಿನ ಸಾಲಿನಲ್ಲಿಯೇ ಆಸೀನರಾಗಿದ್ದರು.

ಕಾಂಗ್ರೆಸ್ ತನ್ನ ವರ್ತನೆಯನ್ನು ಸಮರ್ಥಿಸಿಕೊಂಡು, ಈ ವಿಷಯದಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಪಕ್ಷ ತನ್ನೆಲ್ಲ ಯತ್ನಗಳನ್ನೂ ಮುಂದುವರಿಸಲಿದೆ, ಎಂದಿದೆ. ವಿತ್ತ ಸಚಿವ ಅರುಣ್ ಜೇಟ್ಲಿ, ‘ವಿಷಯದ ಬಗ್ಗೆ ವಾದಿಸಲು ಕಾಂಗ್ರೆಸ್ ಬಳಿ ಸೂಕ್ತ ದಾಖಲೆಗಳಿಲ್ಲ. ಅದಕ್ಕೇ ಲಲಿತ್ ಗೇಟ್ ವಿಷಯವಾಗಿ ಚರ್ಚಿಸಲು ಕಾಂಗ್ರೆಸ್ ಹೆದರುತ್ತಿದೆ,’ ಎಂದು ಹೇಳಿದ್ದಾರೆ. ಕಲಾಪ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಮುನ್ನ , ಪದೆ ಪದೇ ಮುಂಡೂಡಲ್ಪಟ್ಟಿತ್ತು.

Write A Comment