ರಾಷ್ಟ್ರೀಯ

ದೇವಾಲಯದ ಬಳಿ ಸುರಿಯಿತು 500 ರೂ. ಗಳ ನೋಟಿನ ಮಳೆ

Pinterest LinkedIn Tumblr

Monkey

ಆಗ್ರಾ: ವೃಂದಾವನದಲ್ಲಿ ಶನಿವಾರದಂದು ಮಳೆ ಸುರಿದಿದೆ. ಇದು ಸಾಧಾರಣ ಮಳೆಯಲ್ಲ. ಬದಲಾಗಿ 500 ರೂ. ಮುಖ ಬೆಲೆಯ ನೋಟಿನ ಮಳೆ. ಇದನ್ನು ಆಯ್ದುಕೊಳ್ಳಲು ಪೈಪೋಟಿ ನಡೆದಿದ್ದು, ಸಿಕ್ಕವರು ಯಾವುದೇ ಶ್ರಮವಿಲ್ಲದೇ ಕ್ಷಣಾರ್ಧದಲ್ಲೇ ಸಾವಿರಾರು ರೂ. ಗಳಿಸಿದ್ದಾರೆ.

ಮುಂಬೈನ ಬೊರಿವಿಲಿಯಿಂದ ಆಗ್ರಾ, ಮಥುರಾ ಹಾಗೂ ಬೃಂದಾವನ ವೀಕ್ಷಿಸಲು ಆಗಮಿಸಿದ್ದ ಕುಟುಂಬವೊಂದರ ಮಹಿಳೆ ಬಳಿ ಇದ್ದ ಬ್ಯಾಗನ್ನು ಬಂಕೀ ಬಿಹಾರಿ ದೇವಾಲಯದ ಬಳಿ ಕಸಿದುಕೊಂಡಿದ್ದ ಮಂಗವೊಂದು ಅದರಲ್ಲಿದ್ದ 500 ರೂ. ಮುಖ ಬೆಲೆಯ ಸುಮಾರು 1.50 ಲಕ್ಷ ರೂ.ಗಳನ್ನು ಒಂದೊಂದಾಗಿ ಎಸೆಯುತ್ತಿದ್ದರೆ ಹಣ ಕಳೆದುಕೊಂಡವರು ಅಸಹಾಯಕರಾಗಿ ನೋಡುತ್ತಾ ನಿಂತಿದ್ದಾರೆ. ದೇವರ ದರ್ಶನಕ್ಕೆ ಆಗಮಿಸಿದ್ದ ಕೆಲ ಭಕ್ತಾದಿಗಳು ಹಾಗೂ ದೇವಾಲಯದ ಬಳಿ ವ್ಯಾಪಾರ ಮಾಡುತ್ತಿದ್ದವರು ಸಿಕ್ಕಿದ್ದೇ ಚಾನ್ಸ್ ಎಂದು ಇವುಗಳನ್ನು ಆಯ್ದುಕೊಂಡಿದ್ದಾರೆ. ಕೆಲವರು ಕ್ಷಣಾರ್ಧದಲ್ಲೇ ನಾಲ್ಕೈದು ಸಾವಿರ ರೂ. ಗಳನ್ನು ಸಂಗ್ರಹಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ತಮ್ಮ ಬಳಿ ಇದ್ದ ಲಕ್ಷಾಂತರ ರೂ. ಹೀಗೆ ಅನ್ಯಾಯವಾಗಿ ಬೇರೆಯವರ ಪಾಲಾಗುತ್ತಿರುವುದನ್ನು ಕಂಡ ಈ ಕುಟುಂಬದ ಯುವತಿಯೊಬ್ಬಳು ಕಡೇ ಪಕ್ಷ ಸಿಕ್ಕಷ್ಟನ್ನಾದರೂ ತೆಗೆದುಕೊಳ್ಳೋಣವೆಂದು ಆ ಗುಂಪಿನ ನಡುವೆ ತಾನೂ ನುಗ್ಗಿದ್ದು, ಈ ವೇಳೆ ಆಕೆಯ ಬಳಿ ಇದ್ದ 30 ಸಾವಿರ ರೂ. ಬೆಲೆ ಬಾಳುವ ಮೊಬೈಲನ್ನೂ ಯಾರೋ ಎಗರಿಸಿದ್ದಾರೆ. ದೇವರ ಸನ್ನಿಧಿಗೆ ಮುಂಬೈನಿಂದ ಬಂದಿದ್ದ ಈ ಕುಟುಂಬಸ್ಥರು ತಮ್ಮ ಹಣವನ್ನೆಲ್ಲಾ ಕಳೆದುಕೊಂಡು ಭಾರವಾದ ಹೃದಯ ಹೊತ್ತು ಅಲ್ಲಿಂದ ತೆರಳಿದ್ದಾರೆ. ಮಥುರಾದಲ್ಲಿ ಮಂಗಗಳ ಹಾವಳಿ ವಿಪರೀತ ಹೆಚ್ಚಾಗಿದ್ದು, ಈ ಕುರಿತು ಸಂಸದೆ ಹೇಮಾ ಮಾಲಿನಿ ಸಂಬಂಧಿಸಿದವರಿಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲವೆನ್ನಲಾಗಿದೆ. ಮಂಗಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ವೃದ್ದರೊಬ್ಬರು ಈ ಹಿಂದೆ ಸಾವಿಗೀಡಾದ ಬಳಿಕವೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿರುವುದು ಅಕ್ರೋಶಕ್ಕೆ ಕಾರಣವಾಗಿದೆ.

Write A Comment