ಚೆನ್ನೈ: ವಿಮಾನ ನಿಲ್ದಾಣಗಳಲ್ಲಿ ಚಿನ್ನ ಕಳ್ಳ ಸಾಗಾಣಿಕೆ ತಡೆಗಟ್ಟಲು ಏನೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ದೇಶದೊಳಗೆ ಅಕ್ರಮ ಮಾರ್ಗದಲ್ಲಿ ಚಿನ್ನ ಹರಿದು ಬರುತ್ತಿರುವುದು ನಿಂತಿಲ್ಲ. ದಿನ ನಿತ್ಯವೂ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ವಿದೇಶಗಳಿಂದ ಚಿನ್ನ ತರುತ್ತಿರುವವರು ಸಿಕ್ಕಿ ಬೀಳುತ್ತಿದ್ದಾರೆ.
ಇದೀಗ ಚೆನ್ನೈ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದಿಳಿದ 33 ವರ್ಷದ ಶ್ರೀಲಂಕಾ ಮೂಲದ ಮಹಿಳೆ ಜುವೈರಿಯಾ ಎಂಬಾಕೆಯನ್ನು ಅಂದಾಜು 55 ಲಕ್ಷ ರೂ. ಮೌಲ್ಯದ 2 ಕೆ.ಜಿ. ಚಿನ್ನವನ್ನು ತರುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ. ಚಿನ್ನವನ್ನು ಆಕೆ ತಾನು ಧರಿಸಿದ್ದ ಉಡುಪಿನಲ್ಲಿ ಅಡಗಿಸಿಟ್ಟಿದ್ದಳೆಂದು ಹೇಳಲಾಗಿದ್ದು, ತಪಾಸಣೆ ವೇಳೆ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾಳೆ.
ಅಕ್ರಮ ಚಿನ್ನ ಕಳ್ಳ ಸಾಗಾಣಿಕೆದಾರರು ಮಹಿಳೆಯರನ್ನು ಈ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದು, ಈ ಹಿಂದೆಯೂ ಹಲವರು ಸಿಕ್ಕಿ ಬಿದ್ದಿದ್ದರು. ದೇಶದೊಳಕ್ಕೆ ಚಿನ್ನ ಸಾಗಿಸಲು ಹಲವಾರು ತಂತ್ರಗಳನ್ನು ಕಳ್ಳ ಸಾಗಾಣಿಕೆದಾರರು ಅನುಸರಿಸುತ್ತಿದ್ದು, ಇವರುಗಳೊಂದಿಗೆ ವಿಮಾನ ನಿಲ್ದಾಣದ ಕೆಲ ಭದ್ರತಾ ಸಿಬ್ಬಂದಿಯೂ ಶಾಮೀಲಾಗಿರುವ ಸಂಗತಿ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು.