ರಾಷ್ಟ್ರೀಯ

ಗೋದಾವರಿ ಪುಷ್ಕರ ಮೇಳ ದಲ್ಲಿ ಕಾಲ್ತುಳಿತ ಉಂಟಾಗಲು ಕಾರಣವೇನು…?

Pinterest LinkedIn Tumblr

Pushkaram-Naiduದಕ್ಷಿಣದ ಕುಂಭಮೇಳ ಎಂದೇ ಹೆಸರು ಪಡೆದಿರುವ ಆಂಧ್ರದ ಪವಿತ್ರ ಗೋದಾವರಿ ಮಹಾ ಪುಷ್ಕರ ಮೇಳವು 144 ವರ್ಷದ ಬಳಿಕ ಇದೀಗ ಮತ್ತೆ ಬಂದಿದ್ದು, ರಾಜಮಂಡ್ರಿಯ ಪುಷ್ಕರ ಘಾಟ್ ನ ನದಿಯಲ್ಲಿ ಪುಣ್ಯ ಸ್ನಾನ ಮಾಡಲೆಂದು ಲಕ್ಷಾಂತರ ಜನರು ಆಗಮಿಸಿದ್ದಾರೆ. ಆದರೆ, ಸ್ಥಳದಲ್ಲಿ ಜನರ ಸಂಖ್ಯೆ ಹೆಚ್ಚಾದ ಕಾರಣ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿ 23ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಸಾವುಗಳಿಗೆ ಕಾಲ್ತುಳಿತವೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಕಾಲ್ತುಳಿತ ಉಂಟಾಗಲು ಪ್ರಮುಖ ಕಾರಣವೇನು ಎಂಬುದು ಇದೀಗ ಹೊರ ಬೀಳುತ್ತಿತ್ತು, ಕಾಲ್ತುಳಿತಕ್ಕೆ ವಿಐಪಿಗಳ ಆಗಮನವೇ ಕಾರಣ ಎಂದು ಹೇಳಲಾಗುತ್ತಿದೆ.

ಆಂಧ್ರದಲ್ಲಿ ನಡೆಯುತ್ತಿರುವ ಗೋದಾವರಿ ಪುಷ್ಕರ ಮೇಳಕ್ಕೆ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಮತ್ತಿತರೆ ಅಧಿಕಾರಿಗಳು ಆಗಮಿಸಿದ ಕಾರಣ ಹಲವು ಘಂಟೆಗಳ ಕಾಲ ನಾಗರೀಕರು ನದಿಯ ಬಳಿ ಸುಳಿಯದಂತೆ ಕಟ್ಟೆಚ್ಚರವಹಿಸಲಾಗಿತ್ತು. ಸಮಯ ಕಳೆಯುತ್ತಿದ್ದಂತೆ ನದಿಯ ಬಳಿ ಬರುವ ಜನರ ಸಂಖ್ಯೆಯೂ ಹೆಚ್ಚಾಗತೊಡಗಿತು. ಸ್ಥಳದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಅವರ ವಾಹನಗಳನ್ನು ನಡು ರಸ್ತೆಯಲ್ಲೇ ನಿಲ್ಲಿಸಿದ್ದಾರೆ. ಸ್ಥಳದಲ್ಲಿ ಜಾಗದ ಕೊರತೆಯಿದ್ದ ಜನರ ಮಧ್ಯೆ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಉಸಿರಾಟದ ತೊಂದರೆ ಉಂಟಾದ ಕಾರಣ ಸಾಕಷ್ಟು ಮಂದಿ ಪ್ರಜ್ಞೆ ಕಳೆದುಕೊಂಡು ನೆಲಕ್ಕುರುಳಿದ್ದಾರೆ. ಇದರಿಂದಾಗಿ ಜನರ ಮಧ್ಯೆ ಕಾಲ್ತುಳಿತ ಉಂಟಾಯಿತು ಎಂದು ಹೇಳಲಾಗುತ್ತಿದೆ.

ಪ್ರತ್ಯಕ್ಷ ದರ್ಶಿ ಹೇಳುವ ಪ್ರಕಾರ ಸಾಮಾನ್ಯ ನಾಗರೀಕರ ಪ್ರವೇಶಕ್ಕೆ ರಾಜಮಂಡ್ರಿಯ ಮುಖ್ಯ ಘಟಕದ ಬಾಗಿಲನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಗಂಟೆಗಳು ಕಳೆದರೂ ಬಾಗಿಲು ತೆಗೆಯಲಿಲ್ಲ. ಪ್ರತಿಯೊಬ್ಬರು ಬಾಗಿಲು ತೆಗೆಯುವದನ್ನೇ ಕಾಯುತ್ತಾ ಸ್ಥಳದಲ್ಲೇ ನಿಂತರು. ಈ ವೇಳೆ ನೂಕುನುಗ್ಗಲು ಉಂಟಾಯಿತು. ಸಮಯ ಕಳೆಯುತ್ತಿದ್ದಂತೆ ಸ್ಥಳದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಯಿತು. ಹೀಗಾಗಿ ಸ್ಥಳದಲ್ಲಿ ಗಾಳಿಯ ಕೊರತೆ ಉಂಟಾಗಿ ಸ್ಥಳದಲ್ಲಿ ಬಿಗು ವಾತಾವರಣ ಉಂಟಾಯಿತು. ನಂತರ ಹಲವಾರು ಭಕ್ತರು ಸ್ಥಳದಲ್ಲಿ ಪ್ರಜ್ಞಾಹೀನರಾಗಿ ಬಿದ್ದರು. ಸ್ಥಳದಲ್ಲಿ ಜನರು ನಿಲ್ಲಲು ಸರಿಯಾದ ವ್ಯವಸ್ಥೆ ಇರಲಿಲ್ಲ.

ಭದ್ರತೆ ನೀಡುವ ಅಧಿಕಾರಿಗಳು ಜನರನ್ನು ರಕ್ಷಣೆ ಮಾಡಲು ಬದಲಾಗಿ ಅಧಿಕಾರಿಗಳನ್ನು ರಕ್ಷಣೆ ಮಾಡುವತ್ತ ತಮ್ಮ ಗಮನ ಹರಿಸಿದರು. ಅಧಿಕಾರಿಗಳು ಹೋಗುವವರೆಗೂ ಸ್ಥಳದಲ್ಲಿದ್ದ ಜನರು ಸಮಾಧಾನದಿಂದಲೇ ಇದ್ದರು. ಅಧಿಕಾರಿಗಳು ಹೊರಡುತ್ತಿದ್ದಂತೆಯೇ ಬಾಗಿಲು ತೆಗೆಯುತ್ತಾರೆಂಬ ಸೂಚನೆ ಜನರಿಗೆ ಸಿಕ್ಕಿತು. ನಂತರ ಜನರ ಮಧ್ಯೆ ನೂಕುನುಗ್ಗಲು ಉಂಟಾಗಿದೆ. ಬಾಗಿಲು ತೆಗೆಯುವದನ್ನೇ ಕಾತರದಿಂದ ಕಾಯುತ್ತಿದ್ದ ಜನರು ಬಾಗಿಲು ತೆಗೆಯುತ್ತಿದ್ದಂತೆಯೇ ಒಮ್ಮೆಲೇ ಒಳನುಗ್ಗಿದರು. ಈ ವೇಳೆ ಹಲವರು ಕೆಳಗೆ ಬಿದ್ದು, ಕಾಲ್ತುಳಿತಕ್ಕೊಳಗಾದರು. ಸ್ಥಳದಲ್ಲಿ ಜನರು ಕೈತೊಳೆಯುವುದಕ್ಕೂ ಕೊಠಡಿಯ ವ್ಯವಸ್ಥೆ ಇರಲಿಲ್ಲ. ಎಂದು ಹೇಳಿದ್ದಾರೆ.

ಆದರೆ, ಈ ಆರೋಪಗಳನ್ನು ತಳ್ಳಿಹಾಕುತ್ತಿರುವ ಅಧಿಕಾರಿಗಳು ಸರ್ಕಾರ ತನ್ನಿಂದ ಆದ ಎಲ್ಲಾ ವ್ಯವಸ್ಥೆಯನ್ನು ನಿರ್ವಹಿಸಿದೆ. ಘಟನೆಯಲ್ಲಿ ಸರ್ಕಾರವನ್ನು ದೂಷಿಸುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ.

ಘಟನೆ ಕುರಿತಂತೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಘಟನೆಯಲ್ಲಿ ಸಂಭವಿಸಿದ ಸಾವು ನೋವುಗಳು ಬಹಳ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ. ಅಲ್ಲದೆ, ಘಟನೆಯಲ್ಲಿ ಸಾವನ್ನಪ್ಪಿದವರಿಗೆ ತಲಾ 10 ಲಕ್ಷ ಪರಿಹಾರವನ್ನು ಘೋಷಿಸಿದ್ದು, ಘಟನೆ ಕುರಿತಂತೆ ಕೂಲಂಕುಶವಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Write A Comment