ಧರ್ಮಶಾಲಾ: 67 ವರ್ಷದ ಅಮೆರಿಕಾ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಮರಣವನ್ನಪ್ಪಿದ ಘಟನೆ ಧರ್ಮಶಾಲಾದ ಹೊಟೇಲ್ವೊಂದರಲ್ಲಿ ನಡೆದಿದೆ. ಮೂಲಗಳ ಪ್ರಕಾರ ಕಳೆದೊಂದು ವಾರದಿಂದ ಹೊಟೇಲ್ನಲ್ಲಿ ತಂಗಿದ್ದ ಮಹಿಳೆ ಮೂರ್ನಾಲ್ಕು ದಿನಗಳಿಂದ ಕೋಣೆಯ ಬಾಗಿಲು ತೆರೆದಿರಲಿಲ್ಲ.
ಕೋಣೆಯಿಂದ ಕೊಳೆತ ವಾಸನೆ ಬರುತ್ತಿರುವುದನ್ನು ಗಮನಿಸಿದ ಹೊಟೇಲ್ ಸಿಬ್ಬಂದಿ ಕೊಠಡಿಯ ಬಾಗಿಲನ್ನು ತೆರೆದು ನೋಡಿದಾಗ ಮಹಿಳೆಯ ದೇಹ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.
ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತಳಿಗೆ ಸಂಬಂಧಿಸಿದ ವಸ್ತುಗಳನ್ನು ರಕ್ಷಿಸಿ ಇಟ್ಟಿದ್ದು, ನವದೆಹಲಿಯಲ್ಲಿನ ಅಮೆರಿಕಾ ರಾಯಭಾರಿ ಕಚೇರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಂಡಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದ್ದು ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಶವ ಪರೀಕ್ಷೆಯ ವರದಿ ಬಂದ ನಂತರವೇ ಈ ಮಾಹಿತಿ ಹೊರ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.