ಚೆನ್ನೈ: ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಕಾರು ಅಪಘಾತಕ್ಕೆ ಈಡಾಗಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.
ಏರ್ ಪೋರ್ಟ್ಗೆ ತೆರಳುತ್ತಿದ್ದ ವೇಳೆ ಚೆನ್ನೈ ನಗರದ ಗಿಂಡಿ ಎಂಬಲ್ಲಿ ಈ ಘಟನೆ ನಡೆದಿದೆ. ಚಿದಂಬರಂ ಅವರ ಕಾರಿಗೆ ಅವರನ್ನು ಹಿಂಬಾಲಿಸುತ್ತಿದ್ದ ಭದ್ರತಾ ಪಡೆಯಿದ್ದ ಬೆಂಗಾವಲು ವಾಹನ ಡಿಕ್ಕಿ ಹೊಡೆದಿದೆ.
ಬೆಂಗಾವಲು ವಾಹನಕ್ಕೆ ಹಿಂದೆ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅದು ಮಾಜಿ ಸಚಿವರ ಕಾರಿಗೆ ಘರ್ಷಿಸಿದೆ.
“ಘಟನೆಯಲ್ಲಿ ಚಿದಂಬರಮ್ ಅವರಿಗೆ ಯಾವುದೇ ಅಪಾಯವಾಗಿಲ್ಲ. ಅವರ ಕಾರಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಆದರೆ ಬೆಂಗಾವಲು ವಾಹನ ಅಧಿಕ ಪ್ರಮಾಣದಲ್ಲಿ ಜಖಂ ಆಗಿದ್ದು ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ”, ಎಂದು ಪೊಲೀಸರು ತಿಳಿಸಿದ್ದಾರೆ.