ರಾಷ್ಟ್ರೀಯ

ಮೊಬೈಲ್ ಬ್ಯಾಂಕಿಂಗ್ ಆಪ್ ಬಳಕೆ ಎಷ್ಟು ಸುರಕ್ಷಿತ

Pinterest LinkedIn Tumblr

8aಗ್ರಾಹಕರ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂಪಾಯಿ ಹಣವನ್ನು ಹ್ಯಾಕರ್‌ಗಳು ಅಪಹರಿಸಿದರೆಂಬ ಸುದ್ದಿಯನ್ನು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಜೆಪಿ ಮೋರ್ಗನ್ ಚೇಸ್ ಸಿಸ್ಟಮ್ಸ್‌ನ ಜಾಲವನ್ನು ಭೇದಿಸಿ 8.30 ಕೋಟಿ ಖಾತೆದಾರರ ಹೆಸರು, ವಿಳಾಸ, ಫೋನ್ ನಂಬರ್, ಇಮೇಲ್ ವಿಳಾಸ ಮುಂತಾದ ಅಮೂಲ್ಯ ಮಾಹಿತಿಗಳು ಸೋರಿದ್ದು, ಡೇಟಾ ಭದ್ರತೆಯ ಮೇಲಿನ ಅತಿದೊಡ್ಡ ದಾಳಿ ಎಂದು ಪರಿಗಣಿತವಾಯಿತು. ಟೆಸ್ಕೋ ಗ್ರಾಹಕರದ್ದೂ ಇದೇ ಪಾಡು. ಭಾರತದಲ್ಲಿ ಈ ರೀತಿಯ ದೊಡ್ಡ ಮಟ್ಟದ ಭದ್ರತಾ ವೈಫಲ್ಯ ವರದಿಯಾಗಿಲ್ಲದಿದ್ದರೂ, ಈಗಾಗಲೇ ಬಹುತೇಕ ಬ್ಯಾಂಕುಗಳು ಡಿಜಿಟಲ್ ಜಗತ್ತಿಗೆ ವೇಗವಾಗಿ ತೆರೆದುಕೊಳ್ಳುತ್ತಿವೆ. ಗ್ರಾಹಕರಿಗೆ ಹೆಚ್ಚು ಅನುಕೂಲ ಒದಗಿಸುವ ಉದ್ದೇಶದ ಧಾವಂತದಿಂದ ಅಪಾಯವೂ ಎದುರಾಗಬಹುದು. ಹಾಗಿದ್ದರೆ, ಮೊಬೈಲ್ ಬ್ಯಾಂಕಿಂಗ್ ಎಷ್ಟು ಸುರಕ್ಷಿತ?

ಅಕ್ರಮ ಡೌನ್‌ಲೋಡ್ ಅನಧಿಕೃತ ತಾಣಗಳಿಂದ ಆ್ಯಪ್, ಹಾಡುಗಳು ವೀಡಿಯೋ ಡೌನ್‌ಲೋಡ್ ಮಾಡಿಕೊಳ್ಳಬಾರದು. ‘ಕೀಬೈಂಡರ್’ ಎಂಬ ತಂತ್ರಾಂಶವು ಕೂಡ ಅದರ ಜತೆಗೆ ನಿಮ್ಮ ಗಮನಕ್ಕೆ ಬಾರದೆಯೇ ಡೌನ್‌ಲೋಡ್ ಆಗಿ ನಿಮ್ಮ ಮೊಬೈಲ್‌ನ ಆ್ಯಪ್‌ಗೆ ನೀಡಲಾದ ಲಾಗಿನ್ ವಿವರಗಳು ಹ್ಯಾಕರ್‌ಗಳ ಪಾಲಾಗಬಹುದು. ಪರಿಹಾರ: ಬ್ಯಾಂಕುಗಳು ಮೊಬೈಲ್ ಫೋನ್‌ಗಳಲ್ಲಿ ಯಾವುದೇ ಡೇಟಾ ಸ್ಟೋರ್ ಮಾಡಿಕೊಳ್ಳಲು ಅವಕಾಶ ಮಾಡುವುದಿಲ್ಲ. ಮೊಬೈಲ್ ಆ್ಯಪ್‌ನಲ್ಲಿ ಸೂಕ್ಷ್ಮ ಮಾಹಿತಿಯನ್ನು ಅಳಿಸಿ ಹಾಕಲು ಬ್ಯಾಂಕುಗಳು ವಿಶೇಷ ಅಪ್ಲಿಕೇಶನ್ ಬಳಸುತ್ತವೆ.

ಆಪ್‌ಗಳ ಸೆಟ್ಟಿಂಗ್ಸ್ ನಿಮ್ಮ ಮೊಬೈಲ್‌ನಲ್ಲಿ ಯಾವುದೇ ಆ್ಯಪ್ ಡೌನ್‌ಲೋಡ್ – ಇನ್‌ಸ್ಟಾಲ್ ಮಾಡುವಾಗ ಕಾಣಿಸುವ ಎಲ್ಲ ಮಾಹಿತಿಗೂ Yes ಅಂತ ಕ್ಲಿಕ್ ಮಾಡುತ್ತಾ ಹೋಗಬಾರದು. ಸರಿಯಾಗಿ ಓದಿಯೇ ಮುಂದುವರಿಯದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಪರಿಹಾರ: ಆಪರೇಟಿಂಗ್ ಸಿಸ್ಟಂನ ಸೆಕ್ಯುರಿಟಿ ಅಪ್‌ಡೇಟ್‌ಗಳು ಹಾಗೂ ಮಾಲ್‌ವೇರ್ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಗುರುತಿಸುವ ರೀತಿಯ ಆ್ಯಪ್‌ಗಳನ್ನೇ ಬ್ಯಾಂಕುಗಳು ಸಿದ್ಧಪಡಿಸುತ್ತವೆ. ಸಮಸ್ಯೆ ಕಾಣಿಸಿದರೆ, ಮೊಬೈಲ್ ಆ್ಯಪ್ ಮುಚ್ಚುತ್ತದೆ, ಇಲ್ಲವೇ ಹೆಚ್ಚಿನ ತಪಾಸಣೆಗಾಗಿ ಸುರಕ್ಷಿತ ಚಾನೆಲ್ ಮೂಲಕ ಬ್ಯಾಂಕಿಗೆ ಮಾಹಿತಿಯನ್ನು ರವಾನಿಸುತ್ತದೆ.

ಲಾಕ್ ಇಲ್ಲದ ಫೋನ್ ಫೋನ್ ಕಳೆದು ಹೋದರೆ, ಹ್ಯಾಕರ್‌ಗಳಿಗೆ ಅದು ಸ್ವರ್ಗವಾಗುತ್ತದೆ. ಅತ್ಯಂತ ಕನಿಷ್ಠ ಕೆಲಸ ಕಾರ್ಯದ ಮೂಲಕ ನಿಮ್ಮ ಬ್ಯಾಂಕಿಂಗ್ ವಿವರಗಳು ಅವರ ಕೈಗೆ ಸುಲಭವಾಗಿ ಸಿಕ್ಕಿಬಿಡಬಹುದು. ಪರಿಹಾರ: ಎಸ್ಸೆಮ್ಮೆಸ್ ಹಾಗೂ ಧ್ವನಿ ಎನೇಬಲ್ ಆಗಿರುವ ಮೊಬೈಲ್ ಫೋನ್‌ನಿಂದ ಕೋರಿಕೆ ಬಾರದ ಹೊರತು ಬ್ಯಾಂಕುಗಳು ಮೊಬೈಲ್ ಬ್ಯಾಂಕಿಂಗ್‌ಗೆ ಆ್ಯಕ್ಸೆಸ್ ನೀಡುವುದಿಲ್ಲ. ಅವುಗಳು ಅನುಸರಿಸುತ್ತಿರುವ ವಿಧಾನ ಸಾಕಷ್ಟು ಸುರಕ್ಷಿತವಾಗಿದೆ.

ಮೊಬೈಲ್ ಆಪರೇಟಿಂಗ್ ಸಿಸ್ಟಂ ಹಳೆಯ ಮೊಬೈಲ್ ಆಪರೇಟಿಂಗ್ ಸಿಸ್ಟಂ ಬಳಸುವುದು ಹೆಚ್ಚು ಸುರಕ್ಷಿತವಲ್ಲ. ಹೊಸ ಆವೃತ್ತಿಗಳು ಹೆಚ್ಚು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. ಪರಿಹಾರ: ಹೆಚ್ಚಿನ ಬ್ಯಾಂಕುಗಳು ಸುರಕ್ಷಿತವಾದ ಎನ್‌ಕ್ರಿಪ್ಷನ್ ವಿಧಾನದಲ್ಲಿಯೇ ಮಾಹಿತಿಗಳನ್ನು ವರ್ಗಾಯಿಸುತ್ತವೆ. ಬ್ಯಾಂಕುಗಳು ವಿಭಿನ್ನ ಟೂಲ್‌ಗಳು, ಸಿಬ್ಬಂದಿ ಹಾಗೂ ಅಪ್ಲಿಕೇಶನ್‌ಗಳ ಮೂಲಕ ಮೊಬೈಲ್ ಆ್ಯಪ್‌ಗಳ ಮೇಲೆ ದಿನದ ಇಪ್ಪತ್ತನಾಲ್ಕು ಗಂಟೆಯೂ ನಿಗಾ ಇಟ್ಟಿರುತ್ತವೆ. ಈ ರೀತಿಯ ಫೈಲ್‌ಗಳನ್ನು ಡೀಕೋಡ್ ಮಾಡಲು ಹ್ಯಾಕರ್‌ಗಳಿಗೆ ತುಂಬಾ ಕಷ್ಟ.

ವೈಫೈ ಬಳಕೆ ಉಚಿತವಾಗಿ ಲಭ್ಯವಿದೆ ಎಂದ ಮಾತ್ರಕ್ಕೆ ಪಬ್ಲಿಕ್ ಅಥವಾ ಹಂಚಿಕೊಂಡಿರುವ ವೈಫೈಯನ್ನು ಬಳಸಿದರೆ, ಅದು ನಮಗರಿವಿಲ್ಲದಂತೆಯೇ ಮಾಲ್‌ವೇರ್‌ಗಳಿಗೆ ನಮ್ಮ ಮೊಬೈಲನ್ನು ಒಡ್ಡಿಕೊಂಡಂತೆ. ಸ್ಮಾರ್ಟ್ ಫೋನಿನಲ್ಲಿರುವ ಮಹತ್ವದ ಮಾಹಿತಿ ಸೋರಿಹೋಗಬಹುದು. ಪರಿಹಾರ: ಬ್ಲ್ಯಾಕ್-ಲಿಸ್ಟ್ ಆಗಿರುವ ಐಪಿ ವಿಳಾಸದಿಂದ ಬಂದಿರುವ ಯಾವುದೇ ಕೋರಿಕೆಗಳನ್ನೂ ಬ್ಯಾಂಕುಗಳ ವ್ಯವಸ್ಥೆಯು ಸ್ವೀಕರಿಸುವುದಿಲ್ಲ. ಬ್ಯಾಂಕುಗಳು ಐಪಿ ವಿಳಾಸಗಳು ಹಾಗೂ ಡೊಮೇನ್‌ಗಳ ಬ್ಲ್ಯಾಕ್ ಲಿಸ್ಟ್ ಮತ್ತು ವೈಟ್ ಲಿಸ್ಟ್ ಮಾಡಿಕೊಂಡಿರುತ್ತಾ, ಹೆಚ್ಚಿನ ಸುರಕ್ಷತೆ ವಹಿಸುತ್ತವೆ.

ದುರ್ಬಲ ಪಾಸ್‌ವರ್ಡ್ ಎಲ್ಲ ಆ್ಯಪ್‌ಗಳಿಗೆ ಒಂದೇ ಪಾಸ್‌ವರ್ಡ್ ಬಳಸಿದರೆ, ಕೇವಲ ಅಕ್ಷರಗಳನ್ನು ಮಾತ್ರವೇ ಒಳಗೊಂಡ ಪಾಸ್‌ವರ್ಡ್ ಬಳಸಿದರೆ, ಮಾಲ್‌ವೇರ್ ಬಳಸುತ್ತಿರುವ ಹ್ಯಾಕರ್‌ಗಳಿಗೆ ಅವುಗಳನ್ನು ಭೇದಿಸುವುದು ಸುಲಭವಾಗುತ್ತದೆ. ಪರಿಹಾರ: ಮೊಬೈಲ್ ಬ್ಯಾಂಕಿಂಗ್ ಬಳಸುತ್ತಿರುವವರಿಗೆ 6 ಅಕ್ಷರಗಳ ಪಾಸ್‌ವರ್ಡ್ ಅಗತ್ಯ. ನಾಲ್ಕಂಕಿ ಪಾಸ್‌ವರ್ಡ್‌ಗಿಂತ ಇದು ಹೆಚ್ಚು ಸುರಕ್ಷಿತ. ಆರಂಕಿ ಪಾಸ್‌ವರ್ಡ್ ಹ್ಯಾಕ್ ಮಾಡುವ ಆಲ್ಗಾರಿದಂ ತುಂಬಾ ಸಂಕೀರ್ಣ. ಜತೆಗೆ, ನಿರ್ದಿಷ್ಟ ಬಾರಿ ತಪ್ಪು ಪ್ರಯತ್ನ ಮಾಡಿದರೆ ಖಾತೆ ಲಾಕ್ ಆಗುತ್ತದೆ.

ಎಸ್ಸೆಮ್ಮೆಸ್ ಅಪಾಯ ಸಾಧ್ಯತೆ ಲಾಟರಿ ಗೆದ್ದಿದ್ದೀರಿ, ಪ್ರವಾಸಕ್ಕೆ ಆಯ್ಕೆಯಾಗಿದ್ದೀರಿ ಮುಂತಾದ ಸ್ಪ್ಯಾಮ್ ಸಂದೇಶಗಳು ಈ ದಿನಗಳಲ್ಲಿ ಸಾಮಾನ್ಯ. ಅವುಗಳ ಲಿಂಕ್ ಕ್ಲಿಕ್ ಮಾಡಿದರೆ, ಯಾವುದಾದರೂ ಮಾಲ್‌ವೇರ್ ನಿಮ್ಮ ಮೊಬೈಲ್‌ಗೆ ಡೌನ್‌ಲೋಡ್ ಆಗಬಹುದು ಮತ್ತು ಹ್ಯಾಕರ್‌ಗಳು ನಿಮ್ಮ ಬ್ಯಾಂಕಿಂಗ್ ಮಾಹಿತಿಗೆ ನೇರ ಪ್ರವೇಶ ಪಡೆಯುತ್ತಾರೆ. ಪರಿಹಾರ: ಸ್ಪ್ಯಾಮ್ ಮೇಲ್‌ಗಳು ಮತ್ತು ಸಂದೇಶಗಳ ಮೂಲಕ ಬ್ಯಾಂಕಿಂಗ್ ಸರ್ವರ್‌ಗೆ ಪ್ರವೇಶಿಸುವ ಟೂಲ್‌ಗಳ ಬಗ್ಗೆ ಬ್ಯಾಂಕುಗಳು ಕಟ್ಟೆಚ್ಚರ ವಹಿಸಿವೆ. ಲೈಫ್ ಹ್ಯಾಕರ್ ಹಾಗೂ ಗೂಗಲ್ ಅಡ್ಮಿನಿಸ್ಟ್ರೇಟರ್ ಮುಂತಾದ ಟೂಲ್‌ಗಳು ಸ್ಪ್ಯಾಮ್ ಮೇಲ್‌ಗಳನ್ನು ಪತ್ತೆ ಮಾಡಬಲ್ಲವು.

ಮೊಬೈಲ್ ಬ್ಯಾಂಕಿಂಗ್ ಆಪ್ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನಗಳೊಂದಿಗೆ ಅಪ್‌ಡೇಟ್ ಆಗದಿರುವ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಕೂಡ ಮಾಲ್‌ವೇರ್, ವೈರಸ್ ದಾಳಿಗೆ ಸುಲಭವಾಗಿ ತುತ್ತಾಗಬಲ್ಲುದು ಮತ್ತು ಅದರ ವಿವರಗಳು ಸುಲಭವಾಗಿ ಸೋರಿಕೆಯಾಗಬಲ್ಲವು. ಪರಿಹಾರ: ಬ್ಲ್ಯಾಕ್ ಲಿಸ್ಟ್ ಆಗಿರುವ ಅಪ್ಲಿಕೇಶನ್ ಆವೃತ್ತಿಗಳನ್ನು ಪರಿಶೀಲನೆಗೊಳಪಡಿಸಲು ಬ್ಯಾಂಕುಗಳು ಫಿಲ್ಟರ್‌ಗಳನ್ನು ಬಳಸುತ್ತವೆ. ಈ ರೀತಿ ಬ್ಲ್ಯಾಕ್ ಲಿಸ್ಟ್ ಮಾಡಿದ ಆ್ಯಪ್ ಆವೃತ್ತಿಗಳನ್ನು ಬಳಸಿದರೆ, ಖಾತೆದಾರರಿಗೆ ಎರರ್ ಸಂದೇಶ ಬರುತ್ತದೆ ಮತ್ತು ಆ್ಯಪ್ ಅಪ್‌ಗ್ರೇಡ್ ಮಾಡಲು ಸೂಚಿಸಲಾಗುತ್ತದೆ.

ಖಾಸಗಿತನದ ಉಲ್ಲಂಘನೆ ಒನ್-ಟೈಮ್ ಪಿನ್, ಪಾಸ್‌ವರ್ಡ್ (ಒಂದು ಬಾರಿ ಮಾತ್ರ ಕೆಲಸ ಮಾಡುವ ಸಂಕೇತ ಪದ), ಅಥವಾ ಬ್ಯಾಂಕ್ ಖಾತೆ, ನಿಮ್ಮ ಜನ್ಮ ದಿನಾಂಕ ಮುಂತಾದವನ್ನು ಬೇರೆ ಬೇರೆ ಆ್ಯಪ್‌ಗಳಿಗೆ ಬಹಿರಂಗಪಡಿಸಬೇಕಾಗುತ್ತದೆ. ಇದು ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ಗಳ ಹ್ಯಾಕಿಂಗ್ ಅಪಾಯವನ್ನು ಹೆಚ್ಚಿಸಬಲ್ಲುದು. ಪರಿಹಾರ: ಆ್ಯಪ್ ಹಿನ್ನೆಲೆಯಲ್ಲಿ ಚಾಲನೆಯಲ್ಲಿರುವಾಗ ಕ್ಲಿಪ್ ಬೋರ್ಡ್‌ನಲ್ಲಿರುವ ಯಾವುದೇ ಮಾಹಿತಿಯನ್ನು ಬ್ಯಾಂಕಿಂಗ್ ಆ್ಯಪ್ ಸ್ವಯಂ ಅಳಿಸಿಹಾಕಿಬಿಡುತ್ತದೆ. ಈ ಮೂಲಕ ಅಪ್ಲಿಕೇಶನ್ ಬಿಟ್ಟು ಬೇರೆಡೆಗೆ ಆ ಮಾಹಿತಿ ವರ್ಗವಾಗುವುದನ್ನು ತಡೆಯುತ್ತದೆ.

Write A Comment