ಲಕ್ನೋ: ಇತ್ತೀಚೆಗೆ ನೀವು ಮೀನು ಮಳೆ ಬಗ್ಗೆ ಕೇಳಿರಬಹುದು, ಆಲಿಕಲ್ಲು ಮಳೆಯ ಕುರಿತೂ ಕೇಳಿರುತ್ತೀರಿ, ಆದರೆ ಇದು ಬೆಳ್ಳಿಯ ಮಳೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಬೆಳ್ಳಿಯ ಮಳೆಯಾಗಿದೆ. ಅದು ಹೇಗೆ? ಇಲ್ಲಿದೆ ಓದಿ..
ಉತ್ತರಪ್ರದೇಶದ ರಾಜಧಾನಿ ಲಕ್ನೋವನ್ನು ಬಹ್ರೈಚ್ ಜಿಲ್ಲೆಯಲ್ಲಿರುವ ನೇಪಾಳ ಗಡಿವರೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 28ರಲ್ಲಿ ಚಿನ್ನದ ವ್ಯಾಪಾರಿಗಳು ಬೆಳ್ಳಿ ಆಭರಣ ತಯಾರಿಕೆಗಾಗಿ ಎರಡು ಗೋಣಿ ಚೀಲಗಳಲ್ಲಿ ಬೆಳ್ಳಿ ಬಾಲ್‌ಗಳನ್ನು ಬೈಕ್‌ನಲ್ಲಿ ಸಾಗಿಸುತ್ತಿದ್ದರು. ಆದರೆ ಇದರಲ್ಲಿ ಒಂದು ಗೋಣಿ ಚೀಲ ತೂತಾಗಿದ್ದು ಅವರ ಗಮನಕ್ಕೆ ಬಂದಿರಲಿಲ್ಲ. ಬೈಕ್ ನಲ್ಲಿ ಹೋಗುತ್ತಿದ್ದಾಗ ಬೆಳ್ಳಿಯ ಬಾಲ್ ಗಳು ರಸ್ತೆಯಿಡೀ ಚೆಲ್ಲುತ್ತಾ ಹೋಗಿದೆ.
ಇದೇ ಸಂದರ್ಭಕ್ಕೆ ಅಲ್ಲಿ ಭಾರೀ ಮಳೆಯಾಗಿದೆ. ರಸ್ತೆಯಲ್ಲೆಲ್ಲಾ ನೀರಿನ ಜೊತೆ ಬೆಳ್ಳಿ ಬಿದ್ದದ್ದು ನೋಡಿ ಸ್ಥಳೀಯರು ಬೆಳ್ಳಿ ಮಳೆಯಾಗಿದೆ ಎಂದು ಅಂದುಕೊಂಡಿದ್ದಾರೆ. ಚಿನ್ನ, ಬೆಳ್ಳಿ ಪುಕ್ಸಟೆ ಸಿಕ್ಕಿದರೆ ಯಾರಾದರೂ ಬಿಡುತ್ತಾರೆಯೇ, ನಾ ಮುಂದು, ತಾ ಮುಂದು ಎಂದು ಹೆಕ್ಕಿಕೊಳ್ಳಲು ಹೋಗಿದ್ದಾರೆ. ಇದರಿಂದ ಹೆದ್ದಾರಿಯಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಂ ಉಂಟಾಗಿ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಗಿ ಬಂತು.
