ನವದೆಹಲಿ, ಜು.9: ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ನಗರ ಸೇರಿದಂತೆ ಉತ್ತರ ಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಹಾಗೂ ಜಾರ್ಖಂಡ್‌ನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಉತ್ತರ ಪ್ರದೇಶದ ನೋಯ್ಡಾ ಮಯೂರ ವಿಹಾರ್ ಪ್ರದೇಶಗಳಲ್ಲಿ ಒಂದೇ ಸಮನೆ ಮಳೆ ಸರಿಯುತ್ತಿದೆ. ರಾಜಸ್ಥಾನದ ಸಿರದಾಲ ಗುಡ್ಡಗಾಡು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿ ನಾಗರಿಕರು ತೀವ್ರ ಪರದಾಡುವಂತಾಗಿದೆ. ಹಿಮಾಚಲ ಪ್ರದೇಶ, ಜಾರ್ಖಂಡ್‌ನಲ್ಲಿ ವರುಣನ ಆರ್ಭಟ ನಿಂತಿಲ್ಲ.
ಕೆರೆ ಕಟ್ಟೆಗಳೆಲ್ಲ ತುಂಬಿ ಹರಿಯುತ್ತಿದ್ದು, ತಗ್ಗುಪ್ರದೇಶದಲ್ಲಿ ಭಾರೀ ನೀರು ಹೊಕ್ಕಿ ಮನೆಗಳಿಗೆ ಹಾನಿಯಾಗಿರುವುದಲ್ಲದೆ, ಹೊಲ, ಜಮೀನುಗಳು ಪೂರ್ಣ ಜಲಾವೃತಗೊಂಡಿವೆ. ಸರ್ಕಾರ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದರೂ ಮಳೆಯ ಆರ್ಭಟ ಪರಿಹಾರ ಕಾರ್ಯಕ್ಕೆ ತೊಡಕಾಗಿದೆ. ಜನರ ಸುರಕ್ಷತೆಗಾಗಿ ಎಲ್ಲ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತಿದೆ. ಮಳೆಯ ಹಾನಿಯಿಂದ ಉಂಟಾದ ನಷ್ಟವನ್ನು ಭರಿಸಲಾಗುವುದೆಂದು ಸರ್ಕಾರ ತಿಳಿಸಿದೆ.
