ರಾಷ್ಟ್ರೀಯ

ಸ್ನ್ಯಾಪ್‌ಡೀಲ್‌ನಲ್ಲಿ 6 ಕೋಟಿಗೆ ಬೆಂಗಳೂರಿನ ಮನೆ ಮಾರಾಟ

Pinterest LinkedIn Tumblr

18ಹೊಸದಿಲ್ಲಿ: ಬೆಂಗಳೂರಿನ ಐಷಾರಾಮಿ ಮನೆ ಬರೋಬ್ಬರಿ 6 ಕೋಟಿ ರೂ. ಗೆ ಸ್ನ್ಯಾಪ್‌ಡೀಲ್‌ನಲ್ಲಿ ಮಾರಾಟವಾಗಿದೆ. ದೇಶದಲ್ಲಿ ಆನ್‌ಲೈನ್‌ ಮೂಲಕ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಆಸ್ತಿ ಇದಾಗಿದೆ.

ಹೊಸದಿಲ್ಲಿ ಮೂಲದ ಕಂಪನಿ, ಟಾಟಾ ಹೌಸಿಂಗ್‌ನ ಅಪಾರ್ಟ್‌ಮೆಂಟ್‌ಅನ್ನು 1.1 ಕೋಟಿ ರೂ.ಗೆ ಮಾರಾಟ ಮಾಡಿದ ಕೆಲವೇ ದಿನಗಳ ನಂತರ ಈ ಡೀಲ್‌ ನಡೆದಿದೆ. ಮಂತ್ರಿ ಡೆವಲಪರ್ಸ್‌ ಅಭಿವೃದ್ಧಿ ಪಡಿಸಿದ್ದ ಪೆಂಟ್‌ ಹೌಸ್‌ ಸ್ನ್ಯಾಪ್‌ ಡೀಲ್‌ನಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾಗಿದೆ.

ಮೊಬೈಲ್‌, ಟಿವಿ ಮಾರಾಟಕ್ಕೆ ಹೆಸರುವಾಸಿ ಆಗಿರುವ ಸ್ನ್ಯಾಪ್‌ಡೀಲ್‌ – ಹಣಕಾಸು, ಆಟೋಮೊಬೈಲ್‌ ಹಾಗೂ ಆಸ್ತಿ ವಹಿವಾಟು ಕ್ಷೇತ್ರಕ್ಕೂ ಅಡಿ ಇಟ್ಟಿದೆ. ‘ರಿಯಲ್ ಎಸ್ಟೇಟ್‌ ಉದ್ಯಮಕ್ಕೆ ಸ್ನ್ಯಾಪ್‌ ಡೀಲ್‌ ಕಳೆದ ವರ್ಷ ಕಾಲಿಟ್ಟ ನಂತರ ಈವರೆಗೆ ಶೇ.400ರಷ್ಟು ಪ್ರಗತಿ ಸಾಧಿಸಿದೆ. ಈ ಉದ್ಯಮದಲ್ಲಿ ಮತ್ತಷ್ಟು ಮುಂದುವರಿಯುವ ಮಹತ್ವಾಕಾಂಕ್ಷೆ ಇದೆ,’ ಎಂದು ಸ್ನ್ಯಾಪ್‌ ಡೀಲ್‌ನ ಅಮಿತ್‌ ಮಹೇಶ್ವರಿ ಹೇಳಿದ್ದಾರೆ.

‘ಆಸ್ತಿ ಖರೀದಿ ಕುರಿತು ಹಲವು ವರ್ಷಗಳಿಂದ ನಾನಾ ನಗರಗಳಲ್ಲಿ ಸಮೀಕ್ಷೆ ನಡೆಸಿದ್ದೇವೆ. ಯಾರು ಹೆಚ್ಚು ದುಡ್ಡು ಖರ್ಚು ಮಾಡುತ್ತಾರೆ ಎಂಬ ವಿಷಯ ನಮಗೆ ತಿಳಿದಿದೆ. ಆಸ್ತಿ ಇರುವ ಸ್ಥಳ, ಯೋಜನೆ, ಅದರ ಮೊತ್ತವನ್ನು ಆಧರಿಸಿ, ನಿರ್ದಿಷ್ಟ ಗ್ರಾಹಕರಿಗೆ ವಿಷಯ ತಲುಪಿಸುತ್ತೇವೆ,’ ಎಂದಿದ್ದಾರೆ.

‘ಆಸ್ತಿ ವಹಿವಾಟಿನಲ್ಲಿ ಗ್ರಾಹಕರಿಂದ ಮೊದಲು ಬುಕ್ಕಿಂಗ್‌ ಮೊತ್ತವನ್ನು ಸಂಗ್ರಹಿಸುತ್ತೇವೆ. ಗ್ರಾಹಕರನ್ನು ಮನೆಗೆ ಕರೆದೊಯ್ಯುವ ವ್ಯವಸ್ಥೆ ಕಲ್ಪಿಸುತ್ತೇವೆ. ಇತರ ಆನ್‌ಲೈನ್‌ ಪೋರ್ಟಲ್‌ಗಳು ಆಸ್ತಿ ಮಾರಾಟ ವಹಿವಾಟನ್ನು ದಲ್ಲಾಳಿಗಳು ಅಥವಾ ಡೆವಲೆಪರ್‌ಗಳಿಗೆ ವಹಿಸುತ್ತವೆ. ಆದರೆ, ನಾವು ವಹಿವಾಟಿನ ಎಲ್ಲ ಪ್ರಕ್ರಿಯೆಯಲ್ಲಿ ಭಾಗಿ ಆಗುತ್ತೇವೆ. ಒಂದು ವೇಳೆ ಗ್ರಾಹಕರಿಗೆ ಮನೆ ಇಷ್ಟ ಆಗದಿದ್ದರೆ, ಕಮೀಷನ್‌ ಹಣವನ್ನು ಹಿಡಿದುಕೊಂಡು ಉಳಿದ ಬುಕ್ಕಿಂಗ್‌ ಮೊತ್ತವನ್ನು ವಾಪಸ್‌ ನೀಡುತ್ತೇವೆ,’ಎಂದು ಅಮಿತ್‌ ವಿವರಿಸುತ್ತಾರೆ.

Write A Comment