ರಾಷ್ಟ್ರೀಯ

ಸಮರಸವೇ ಜೀವನ: ದಾಂಪತ್ಯದ ಸವಿ

Pinterest LinkedIn Tumblr

14* ಸುನೀತಾ ಬಿ ಎಂ

ಕೆಲಸಕ್ಕೂ ಹೋಗದೆ, ಜವಾಬ್ದಾರಿಯನ್ನೂ ತೆಗೆದುಕೊಳ್ಳದ ಸ್ನೇಹಿತರೊಂದಿಗೆ ಸುತ್ತಾಡಿಕೊಂಡಿರುವ ಮಗನಿಗೊಂದು ಮದುವೆ ಮಾಡಿ. ಆಗ ಒಂದು ದಾರಿಗೆ ಬರ‌್ತಾನೆ…. ಮಗಳಿಗೆ ಆದಷ್ಟು ಬೇಗ ಮದುವೆ ಮಾಡಿ ಮುಗಿಸಿಬಿಡಿ ಸ್ವಲ್ಪ ಗಂಭೀರವಾಗಿ ಇರುವುದನ್ನಾದರೂ ಕಲಿತುಕೊಳ್ಳುತ್ತಾಳೆ… ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಲೇ ಇರುತ್ತವೆ.

ಕೆಲವರಿಗೆ ಮದುವೆಯ ನಂತರದ ಜೀವನ ಉತ್ತಮ ದಾರಿಗೆ ಕರೆದುಕೊಂಡು ಹೋದರೆ, ಇನ್ನು ಕೆಲವರಿಗೆ ದುಃಸ್ವಪ್ನವಾಗಿಬಿಡುತ್ತದೆ. ಮದುವೆ ಆಗದವರಿಗೆ ಮದುವೆ ಬಗ್ಗೆ ಕುತೂಹಲವಿದ್ದರೆ, ಮದುವೆ ಆದವರಿಗೆ ಅಯ್ಯೋ ಯಾಕಪ್ಪ ಇಷ್ಟು ಬೇಗ ಮದುವೆಯಾದೆ? ಪ್ರೈವೆಸಿ ಅನ್ನೋದೆ ಇಲ್ಲ ಎಂಬ ಮೂಲಕ ಪುನರ್ ವಿಮರ್ಶೆಗೆ ಎಡೆಮಾಡಿಬಿಡುತ್ತದೆ.

ಮದುವೆ… ಮದುವೆ…: ಎಲ್ಲದಕ್ಕೂ ಮದುವೆಯೇ ಉತ್ತರ ಎಂಬುದು ಹಿರಿಯರ ಮಾತು ಅಂಬೋಣ. ಎಲ್ಲರ ಜೀವನದಲ್ಲೂ ಇದು ಪರಿಣಾಮ ಬೀರುತ್ತದೆ ಎಂದು ಹೇಳಲಾಗದು. ಹೊಸ ಸಂಗಾತಿ ಸಿಕ್ಕಾಗ ಜೀವನದ ರೀತಿ ನೀತಿಗಳು ಬದಲಾಗುತ್ತವೆ. ಬದುಕಿಗೆ ಹೊಸ ಹೆಣ್ಣಿನ ಆಗಮನ, ಗಂಡನ ಸಾನಿಧ್ಯ ಖುಷಿ ನೀಡುತ್ತದೆ. ಖುಷಿಯನ್ನು ಅನುಭವಿಸುವ ರೀತಿಗಳೂ ಬದಲಾಗುತ್ತಾ ಹೋಗುತ್ತವೆ.

ದೂರುವುದು ಬೇಡ: ಇದೇ ಸಂದರ್ಭ ಕೆಲವು ಕಷ್ಟಗಳು ಎದುರಾದವೆಂದರೆ ಅದಕ್ಕೆ ಪರಸ್ಪರರನ್ನು ದೂರುವುದು ಸರಿಯಲ್ಲ. ಜೀವನದಲ್ಲಿ ಎಲ್ಲರಿಗೂ ಕಷ್ಟ ಸುಖಗಳು ಇದ್ದೇ ಇರುತ್ತವೆ. ಮತ್ತೊಬ್ಬರ ಆಗಮನದಿಂದಲೇ ಕಷ್ಟಗಳು ಆರಂಭವಾಗುತ್ತವೆ ಎಂಬುದು ಮಾತ್ರ ಕಾಕತಾಳೀಯವೆ. ಕಷ್ಟಕ್ಕೂ ಆ ವ್ಯಕ್ತಿಯ ಆಗಮನಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಕಷ್ಟ ಸುಖಗಳನ್ನು ಹಂಚಿಕೊಂಡು ಬಾಳುವುದನ್ನು ಮದುವೆ ಎಂಬ ವ್ಯವಸ್ಥೆ ಕಲಿಸುತ್ತದೆಯೇ ಹೊರತು ಸಮಸ್ಯೆಗಳಿಗೆ ಉತ್ತರವಲ್ಲ.

ಒಂದಾಗಿ ಬದುಕಿ: ಎರಡು ದೇಹ ಒಂದು ಮನಸ್ಸು, ಮೇಡ್ ಫಾರ್ ಈಚ್ ಅಧರ್…. ಇವು ರೊಮಾಂಟಿಕ್ ಮಂತ್ರ. ಈ ಮಂತ್ರ ಎಷ್ಟು ಅಗಾಧವೆಂದರೆ ತಾನೇನು ಯೋಚಿಸುತ್ತಿದ್ದೇನೆ ಎಂಬುದು ಸಂಗಾತಿಗೆ ತಿಳಿದುಬಿಡುತ್ತದೆ. ಆಗ ಮಾತ್ರ ಎರಡು ದೇಹ, ಒಂದೇ ಮನಸ್ಸು ಎನಿಸಿಕೊಳ್ಳುತ್ತದೆ. ಸಂಗಾತಿಗೆ ನೋವಾದರೆ, ತನಗೂ ಆಗುತ್ತದೆ ಎಂಬ ಭಾವ ಬಂದು ಬಿಡುತ್ತದೆ. ಹೆಣ್ಣು – ಗಂಡು ಜೊತೆ ಸೇರಿ ಆ ಸಂಬಂಧವನ್ನು ಪ್ರೀತಿಯಿಂದ ಉಳಿಸಿಕೊಳ್ಳುವ ಪ್ರಯತ್ನವೇ ಸಂಬಂಧಗಳನ್ನು ಗಟ್ಟಿ ಮಾಡುತ್ತದೆ. ಎಲ್ಲರನ್ನೂ ಸಂತೋಷವಾಗಿರಿಸಿಕೊಳ್ಳಲು ನಮ್ಮ ಸಂತೋಷವನ್ನು ಕಳೆದುಕೊಳ್ಳಲೇಬೇಕು ಎಂಬ ಕಲ್ಪನೆಯನ್ನು ಬಿಟ್ಟು ನಮ್ಮ ಖುಷಿಯೂ ಅವರ ಖುಷಿಯಾಗಿರಲಿ, ಅವರ ಖುಷಿಯಲ್ಲಿ ನಮ್ಮ ಸಂತೋಷ ಕಂಡುಕೊಳ್ಳೋಣ ಎಂಬ ಧೋರಣೆ ಇದ್ದರೆ ಎಲ್ಲವೂ ಖುಷಿ ಖುಷಿಯೇ…

ಮದುವೆಯಾಗಿದ್ದೇಕೆ?: ಹನಿಮೂನ್ ನಂತರ ಎಲ್ಲವೂ ತಿಳಿಯಾಗುತ್ತಾ ಹೋಗುತ್ತದೆ. ಮದುವೆ ಹೊಸತರಲ್ಲಿ ಅವಳ ನಗು, ವ್ಯಕ್ತಿತ್ವ, ಬ್ಯೂಟಿ, ಆಸೆ, ಆಕಾಂಕ್ಷೆಗಳೆಲ್ಲವೂ ಸರಿಯೆನಿಸುತ್ತದೆ. ವರ್ಷಗಳು ಉರುಳಿದಂತೆ ಜಗಳಗಳು ಆರಂಭವಾಗಿಬಿಡುತ್ತವೆ. ಮೊದಲಿಗೆ ಸಣ್ಣ ಸಣ್ಣ ಜಗಳಗಳು ಆಮೇಲೆ ದೂರಾಗಿ ಬಿಡುವಷ್ಟು ಬದಲಾಗುತ್ತವೆ. ಇಷ್ಟೆಲ್ಲ ಜಗಳಗಳಾಗುವಾಗಲೇ ನಾನು ಮೊದಲೇ ಚೆನ್ನಾಗಿದ್ದೆ. ನಿನ್ನ ಮದುವೆಯಾಗಿ ನನ್ನ ಜೀವನವೇ ಹಾಳಾಯ್ತು ಎಂಬ ಮಾತೂ ಬಂದು ಬಿಡುತ್ತದೆ. ಈ ಹಾಳಾಯ್ತು ಎನ್ನುವ ಪದವೇ ಜೀವನಕ್ಕೆ ಇನ್ನೊಂದು ತಿರುವು ಕೊಟ್ಟುಬಿಡುತ್ತದೆ. ಈ ಸಂಬಂಧ ಹಾಳಾಗದಂತೆ ಗಟ್ಟಿ ಮಾಡಿಕೊಳ್ಳುವ ಶಕ್ತಿ ನಿಮ್ಮಲ್ಲೇ ಇರುತ್ತದೆ.

ಪ್ರೀತಿ ಅಪರಂಜಿ: ಮೊದಲಿಗೆ ಸುಂದರವಾಗಿ ಕಾಣಿಸಿಕೊಂಡಿದ್ದ ಸಂಗಾತಿ ವರ್ಷಗಳು ಕಳೆದಂತೆ ಆಕರ್ಷಕವಾಗಿ ಕಾಣಿಸುವುದಿಲ್ಲ. ಸಂಗಾತಿಯ ದೇಹದಲ್ಲಾಗುವ ಬದಲಾವಣೆಯಿಂದ ಶಾರೀರಿಕ ಆಕರ್ಷಣೆಯೂ ಕಡಿಮೆಯಾಗಬಹುದು. ಇದು ಸಹಜವೇ. ಶಾರೀರಿಕ ಸುಖ ಕೊಟ್ಟರೆ ಮಾತ್ರ ಅಲ್ಲಿ ಪ್ರೀತಿ ಇರುತ್ತದೆ ಎಂಬುದು ತಪ್ಪು ಕಲ್ಪನೆ. ನಿಮ್ಮ ಗುಣ, ನಡತೆ, ತಾಳ್ಮೆ, ಮುಗ್ಧತೆ, ನೇರ ನುಡಿ, ಕಾಳಜಿ ಹಾಗೂ ಸಮಯ ಪಾಲನೆ ಎಲ್ಲವೂ ಸಂಗಾತಿಯನ್ನು ಆಕರ್ಷಿಸುವ ಗುಣಗಳು. ಪ್ರೀತಿ ಮನಸ್ಸಿನಿಂದ ಹುಟ್ಟಬೇಕೇ ಹೊರತು ಆ ಕ್ಷಣದ ತೋರಿಕೆಯಾಗಬಾರದು. ಅಂತಹ ಅಪ್ಪಟ ಪ್ರೀತಿಯೇ ಬದುಕಿಗೆ ಪ್ರತಿದಿನ, ಪ್ರತಿಕ್ಷಣ ಹೊಸತನ ಕೊಡುತ್ತದೆ.

ನಿನ್ನಿಂದಲೇ: ನಿನ್ನಿಂದಲೇ ಜೀವನದಲ್ಲಿ ಖುಷಿ ಗಳಿಗೆಗಳು ಬಂದವು ಎಂದು ಮುದ್ದಾಡಿದ್ದ ಸಂಗಾತಿ, ಜಗಳವಾಡಿದ ನಂತರ ನಾನ್ಯಾಕಾದರೂ ನಿನ್ನನ್ನು ಮದುವೆಯಾದೆನೋ ಎಂಬ ಮಾತು ಬಂದರಂತೂ ಅಲ್ಲಿಗೇ ಅರ್ಧ ಸಂಬಂಧ ನೆಲಕಚ್ಚಿದಂತೆ. ಹಾಗಾಗಿ ನೀವು ಪ್ರೀತಿ ಮಾಡಿದ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಪ್ರೀತಿಯನ್ನು ಸ್ವೀಕರಿಸಿ, ನಿಮಗೆ ಪ್ರೀತಿ ಕೊಟ್ಟದ್ದು, ಕಾಳಜಿ ತೋರಿದ್ದು, ಬದುಕಿಗೊಂದು ದಾರಿ ತೋರಿದ್ದು ಇದೇ ಸಂಗಾತಿ. ಆ ಸಂಗಾತಿಯನ್ನು ಅಷ್ಟು ಬೇಗ ದ್ವೇಷಿಸುವುದು, ದೂಷಿಸುವುದನ್ನು ಬಿಟ್ಟು ಅವರೊಂದಿಗೆ ಕಳೆದ ಖುಷಿ ಗಳಿಗೆಗಳನ್ನು ನೆನಪಿಸಿಕೊಳ್ಳಿ.

ಗೌರವ ಇರಲಿ: ದಾಂಪತ್ಯದಲ್ಲಿ ಪ್ರೀತಿಯೊಂದಿದ್ದರೆ ಸಾಲದು. ಪರಸ್ಪರ ಗೌರವವೂ ಇರಬೇಕು. ಯಾವಾಗ ನಾನು ಗಂಡು ನಾನೇ ಮೇಲು. ನಾನು ಹೇಳಿದಂತೆಯೇ ನಡೆಯಬೇಕು ಅಥವಾ ನಾನು ಹೆಣ್ಣು ನಾನು ಏನು ಬೇಕಾದರೂ ಮಾಡಬಲ್ಲೆ ಎಂಬ ಅಹಂ ಬಂದು ಬಿಟ್ಟರಂದೂ ಆ ದಾಂಪತ್ಯ ಹಳ್ಳ ಹತ್ತುವುದರಲ್ಲಿ ಎರಡು ಮಾತಿಲ್ಲ. ಇಬ್ಬರ ಇಷ್ಟ, ಕಷ್ಟಗಳೇನೇ ಇರಲಿ ಅದನ್ನು ಪರಸ್ಪರ ಪ್ರೀತಿಯಿಂದ ನಯವಾಗಿ ಹೇಳಿ ಸರಿಪಡಿಸಿಕೊಂಡುಬಿಡಿ. ಪರಸ್ಪರ ಅರ್ಥ ಮಾಡಿಕೊಂಡು, ಗೌರವ ನೀಡುತ್ತಾ ಬದುಕುವುದೇ ಜೀವನ.

ಮಕ್ಕಳೂ ಇರಲಿ: ಸುಖ ದಾಂಪತ್ಯ ಎಂದರೆ ಅಲ್ಲಿ ಮಕ್ಕಳಿದ್ದರೇ ಚೆನ್ನ. ಅರ್ಧ ಜಗಳಗಳು ನಿಲ್ಲುವುದೇ ಮಕ್ಕಳಿಂದ ಎಂದರೆ ನೀವು ನಂಬಲೇಬೇಕು. ಮಕ್ಕಳಿದ್ದರೆ ಅಲ್ಲೊಂದು ಉತ್ಸಾಹ, ಮಗ್ಧತೆ, ನಗೆಯ ಬುಗ್ಗೆ, ಕಲವರ ಇದ್ದೇ ಇರುತ್ತದೆ. ಎಲ್ಲ ಕಷ್ಟ, ಸಂಕಟ, ನೋವುಗಳನ್ನೆಲ್ಲಾ ಮರೆಸುವ, ಮನಸ್ಸುಗಳಿಗೆ ಬದುಕಿನಲ್ಲಿ ಚೈತನ್ಯ ನೀಡುವ ಶಕ್ತಿ ಮಕ್ಕಳಿಗಿದೆ. ಹಾಗಂತ ಸಮಸ್ಯೆ ಪರಿಹಾರಕ್ಕಾಗಿಯೇ ಮಕ್ಕಳನ್ನು ಮಾಡಿಕೊಳ್ಳುವುದು ಬೇಡ. ಮಕ್ಕಳು ಪ್ರೀತಿ ಸಂಕೇತ.

ಆತ್ಮಗೌರವ ದಾಂಪತ್ಯ ಜೀವನದಲ್ಲಿ ಸಂತೋಷ ತುಂಬಿರಬೇಕೆಂದರೆ ತಾವು ಖುಷಿಯಾಗಿರುವುದಲ್ಲದೇ ಸಂಗಾತಿಯನ್ನು ಸಂತೋಷವಾಗಿ ಇಡಲು ಪ್ರಯತ್ನಿಸಬೇಕು. ನಮ್ಮ ಬದುಕಿನಲ್ಲಿ ನಮಗೆಷ್ಟು ಆತ್ಮಗೌರವ ಮುಖ್ಯವೋ ಅಷ್ಟೂ ನಮ್ಮ ಸಂಗಾತಿಗೂ ಸಿಗಬೇಕೆನ್ನುವ ಬದ್ಧತೆ ಇರಬೇಕು. ಬದುಕಿಗೆ ಬದ್ಧರಾಗಿದ್ದರೆ ಎಲ್ಲವೂ ಸರಿಯಾದ ಹಾದಿಯಲ್ಲೇ ಸಾಗುತ್ತದೆ’

Write A Comment