ರಾಷ್ಟ್ರೀಯ

ಜವಾಹರಾಲ್ ನೆಹರೂ ತಾತ ‘ಮುಸ್ಲಿಂ’: ವಿಕಿಪೀಡಿಯಾ ಪುಟವನ್ನು ತಿದ್ದಿದ ಕೇಂದ್ರ ಸರಕಾರ?

Pinterest LinkedIn Tumblr

6221nehru_4

ಹೊಸದಿಲ್ಲಿ,ಜು.1: ಭಾರತದ ಪ್ರಪ್ರಥಮ ಪ್ರಧಾನಿ ಜವಾಹರಾಲ್ ನೆಹರೂ ಅವರ ತಾತ ಗಂಗಾಧರ್ ನೆಹರೂ ಮುಸ್ಲಿಮರಾಗಿದ್ದರು ಎಂಬ ವಿಷಯವು ಅಂತರ್ಜಾಲದ ಮಾಹಿತಿ ತಾಣ ವಿಕಿಪೀಡಿಯಾದಲ್ಲಿ ಪ್ರಕಟವಾಗಿರುವುದು ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಜವಾಹರಲಾಲ್ ನೆಹರೂ ಕುರಿತಾದ ಮಾಹಿತಿಯುಳ್ಳ ವಿಕಿಪೀಡಿಯಾ ಪುಟದಲ್ಲಿ ನೆಹರೂ ಅವರ ಅಜ್ಜ ಗಂಗಾಧರ್ ನೆಹರೂ, ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಮಾಹಿತಿಯನ್ನು ಸೇರ್ಪಡೆಗೊಳಿಸಲಾಗಿದೆ. ಭಾರತ ಸರಕಾರದ ಐಪಿ(ಇಂಟರ್‌ನೆಟ್ ಪ್ರೊಟೊಕಾಲ್) ವಿಳಾಸದ ಮೂಲಕವೇ ಈ ಮಾಹಿತಿಯನ್ನು ವಿಕಿಪೀಡಿಯಾ ಪುಟಕ್ಕೆ ಸೇರಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ಜವಾಹರಲ್‌ಲಾಲ್ ನೆಹರೂ ತಾತ ಗಂಗಾಧರ್ ಅವರು ಹುಟ್ಟಿನಿಂದ ಮುಸ್ಲಿಂ ಆಗಿದ್ದರು ಮತ್ತು ಅವರ ಹೆಸರು ಗಿಯಾಸುದ್ದೀನ್ ಎಂದಾಗಿತ್ತು. ಆದರೆ ಬ್ರಿಟಿಷರ ಹಿಡಿತದಿಂದ ಪಾರಾಗಲು, ಅವರು ತನ್ನ ಹೆಸರನ್ನು ಗಂಗಾಧರ್ ಎಂಬುದಾಗಿ ಬದಲಾಯಿಸಿಕೊಂಡಿದ್ದರು ಎಂಬುದಾಗಿ ಉಲ್ಲೇಖಿಸಲಾಗಿದೆ.
ಭಾರತ ಸರಕಾರದ ಸ್ವಾಮ್ಯಕ್ಕೆ ಸೇರಿದ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಒದಗಿಸಿರುವ ಐಪಿ ವಿಳಾಸದ ಮೂಲಕವೇ ಈ ಮಾಹಿತಿಯನ್ನು ವಿಕಿಪೀಡಿಯಾ ಪುಟಕ್ಕೆ ಸೇರಿಸಲಾಗಿದೆಯೆಂದು ತಿಳಿದುಬಂದಿದೆ.
ಜವಾಹರಲಾಲ್ ನೆಹರೂ ಅವರಿಗೆ, ಭಾರತದ ಪ್ರಪ್ರಥಮ ಗವರ್ನರ್ ಜನರಲ್ ಲಾರ್ಡ್‌ವೌಂಟ್‌ಬ್ಯಾಟನ್ ಅವರ ಪತ್ನಿಯ ಜೊತೆಗಿರುವ ‘ಪ್ರಣಯ’ ಸಂಬಂಧದ ಬಗ್ಗೆಯೂ ಎನ್‌ಐಸಿಯ ಐಪಿ ವಿಳಾಸದ ಮೂಲಕ ತುರುಕಿಸಲಾಗಿದೆಯೆಂದು ಪತ್ರಿಕೆಯು ಬಹಿರಂಗಪಡಿಸಿದೆ.
ತನ್ಮಧ್ಯೆ ನೆಹರೂ ಕುರಿತಾದ ವಿಕಿಪೀಡಿಯಾ ಪುಟದಲ್ಲಿ ಎನ್‌ಐಸಿ ಸೇರ್ಪಡೆಗೊಳಿಸಿರುವ ಮಾಹಿತಿಗೆ ಕಾಂಗ್ರೆಸ್ ಪಕ್ಷವು ತೀವ್ರ ಟೀಕೆ ವ್ಯಕ್ತಪಡಿಸಿದೆ.
ಭಾರತದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ವಂಶಾವಳಿಯನ್ನು ಬದಲಾಯಿಸುವ ಮತ್ತು ಸಂಘಪರಿವಾರದ ಪರ ಪ್ರಚಾರವನ್ನು ಮಾಡುವ ಕಾರ್ಯದಲ್ಲಿ ಎನ್‌ಐಸಿಯು ತೊಡಗಿರುವುದಾಗಿ ಅದು ಅಪಾದಿಸಿದೆ.
‘‘ಜವಾಹರಲಾಲ್ ನೆಹರೂ, ಮೋತಿಲಾಲ್ ನೆಹರೂ ಅವರ ವಿಕಿಪೀಡಿಯಾ ಪುಟಗಳನ್ನು ತಿರುಚಲಾಗಿದೆ. ಕೇಂದ್ರ ಸರಕಾರದ ಐಪಿ ವಿಳಾಸದ ಮೂಲಕ ಈ ರೀತಿ ಮಾಡಿರುವುದು ತೀರಾ ಶೋಚನೀಯ’’ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ಸರಕಾರಿ ಐಪಿ ವಿಳಾಸದ ಮೂಲಕ ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ನಾಯಕರ ವಿಕಿಪೀಡಿಯಾ ಪುಟಗಳನ್ನು ಹೇಗೆ ತಿರುಚಲಾಗಿದೆಯೆಂಬುದಕ್ಕೆ ಕೇಂದ್ರ ಸರಕಾರ ಉತ್ತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಆದಾಗ್ಯೂ,ಎನ್‌ಐಸಿ ಸೇರಿಸಿರುವ ಈ ಮಾಹಿತಿಗಳನ್ನು ಆನಂತರ ವಿಕಿಪೀಡಿಯಾದ ‘ಸ್ವಯಂಪ್ರೇರಿತ ಸಂಪಾದಕರು’ ಅಳಿಸಿಹಾಕಿದ್ದಾರೆಂದು ತಿಳಿದುಬಂದಿದೆ.

Write A Comment