ರಾಷ್ಟ್ರೀಯ

ತಿಹಾರ್ ಜೈಲಿನಲ್ಲಿ ಸುರಂಗ ಕೊರೆದು ವಿಚಾರಣಾಧೀನ ಖೈದಿಗಳಿಬ್ಬರು ಪರಾರಿ

Pinterest LinkedIn Tumblr

Tihar Jail

ನವದೆಹಲಿ, ಜೂ.29: ನೆಲದಲ್ಲಿ ಸುರಂಗ ಕೊರೆದುಕೊಂಡು ವಿಚಾರಣಾಧೀನ ಖೈದಿಗಳಿಬ್ಬರು ಪರಾರಿಯಾಗಿರುವ ಘಟನೆ ದೇಶದಲ್ಲೇ ಅತಿ ದೊಡ್ಡ ಹಾಗೂ ಬಿಗಿ ಭದ್ರತೆಯ ತಿಹಾರ್ ಜೈಲಿನಲ್ಲಿ ನಡೆದಿದೆ. ಪರಾರಿಯಾಗಿರುವ ಇಬ್ಬರ ಪೈಕಿ ಒಬ್ಬನನ್ನು ಬಂಧಿಸಲಾಗಿದೆ ಎಂಬ ವದಂತಿಯಿದೆಯಾದರೂ, ಜೈಲು ಅಧಿಕಾರಿಗಳು ಯಾವುದನ್ನೂ ಖಚಿತಪಡಿಸಿಲ್ಲ.

ಇನ್ನು ತಪ್ಪಿಸಿಕೊಂಡಿರುವ ಇನ್ನೊಬ್ಬ ಭಾರೀ ಅಪಾಯಕಾರಿ ಖೈದಿ ಎಂದೂ ಹೇಳಲಾಗುತ್ತಿದೆ. ತಿಹಾರ್ ಜೈಲಿನ ಸಮುಚ್ಚಯದ ಸಬ್‌ಜೈಲ್-7 ರಿಂದ ತಪ್ಪಿಸಿಕೊಂಡಿರುವ ಇವರು, ಜೈಲಿನ ಕಾಂಪೌಂಡ್ ಗೋಡೆ ಕೆಳಗೆ ನೆಲದಲ್ಲಿ ಸುರಂಗ ಕೊರೆದು ಆ ಮೂಲಕ ಪರಾರಿಯಾಗಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಿಶ್ವದ ಕುತೂಹಲ ಕೆರಳಿಸಿದ್ದ ಜೈಲ್ ಬ್ರೇಕ್ ಬೆನ್ನಲ್ಲೇ ಭಾನುವಾರ ತಿಹಾರ್ ಜೈಲ್‌ನಲ್ಲಿ ಈ ಘಟನೆ ನಡೆದಿದೆ.

ಎಂದಿನಂತೆ ಹಾಜರಾತಿ ಹಾಕುವಾಗ ಈ ಇಬ್ಬರು ಪ್ರತಿಕ್ರಿಯೆ ನೀಡದೆ ಇದ್ದಾಗ, ಆಘಾತಕ್ಕೊಳಗಾದ ಜೈಲ್ ಸಿಬ್ಬಂದಿ, ಪರಿಶೀಲಿಸಿದಾಗ ಈ ಸುರಂಗ ನೋಡಿ ಅವಕ್ಕಾಗಿದ್ದಾರೆ. ಪರಾರಿಯಾಗಿರುವ ಇಬ್ಬರೂ 18 ಮತ್ತು 21 ವಯಸ್ಸಿನ ಖೈದಿಗಳಾಗಿದ್ದಾರೆ.

ಮೂರನೆ ಪ್ರಕರಣ :ತಿಹಾರ ಜೈಲಿನಲ್ಲಿ ಈ ರೀತಿ ಖೈದಿಗಳು ಪರಾರಿಯಾಗುತ್ತಿರುವುದು ಇದು ಮೂರನೆ ಬಾರಿ. ಆದರೆ ಹೀಗೆ ಸುರಂಗ ಕೊರೆದಿರುವುದು ಮಾತ್ರ ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ. ಮೊದಲು ಪರಾರಿಯಾಗಿದ್ದವನು ಅಂತಾರಾಷ್ಟ್ರೀಯ ಸ್ಮಗ್ಲರ್ ಚಾರ್ಲ್ಸ್ ಶೋಭರಾಜ್ ಹಾಗೂ ಎರಡನೆ ಬಾರಿ ಸಂಸದೆ ಫೊಲನ್‌ದೇವಿ ಹಂತಕ ಷೇರ್‌ಸಿಂಗ್ ರಾಣಾ. ಇದೀಗ ಮೂರನೇ ಬಾರಿ ಈ ಇಬ್ಬರು ವಿಚಾರಣಾಧೀನ ಖೈದಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

Write A Comment