ಮನೋರಂಜನೆ

ಕೋಮಾದಿಂದ ಹೊರ ಬಂದ ಬಳಿಕ ಮನದ ಬಯಕೆ ಈಡೇರಿಸಿಕೊಂಡ ಬಾಲಕಿ

Pinterest LinkedIn Tumblr

pawan

ಆ ಬಾಲಕಿ ಕೋಮಾದಲ್ಲಿದ್ದು, ವೈದ್ಯರು ಆಕೆ ಬದುಕುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದ್ದರು. ಆಗ ಆಕೆಯ ಪೋಷಕರು ತಮ್ಮ ಮಗಳ ಕೊನೆಯ ಆಸೆಯನ್ನಾದರೂ ನೆರವೇರಿಸಬೇಕೆಂದು ಎನ್.ಜಿ.ಓ. ಒಂದರ ಮೊರೆ ಹೋಗಿದ್ದರು. ನಂತರ ನಡೆದದ್ದೇ ಪವಾಡ. ಈ ಸ್ಟೋರಿ ಓದಿದರೆ ನಿಮಗೇ ಗೊತ್ತಾಗುತ್ತದೆ.

ಆಂಧ್ರಪ್ರದೇಶದ ಖಮ್ಮಂ ಜಿಲ್ಲೆಯಲ್ಲಿ ಇಂಜಿನಿಯರ್ ಆಗಿದ್ದ ಬಂಡಿ ನಾಗಯ್ಯ ಎಂಬವರ ಪುತ್ರಿ 13 ವರ್ಷದ ಬಂಡಿ ಶ್ರೀಜಾ ಮಾರಣಾಂತಿಕ ಕಾಯಿಲೆಗೊಳಗಾಗಿ ಖಮ್ಮಂ ನ ಕಾರ್ತಿಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ವೈದ್ಯರು ನೀಡಿದ ಯಾವ ಚಿಕಿತ್ಸೆಗೂ ಆಕೆ ಸ್ಪಂದಿಸದೇ ಇದ್ದಾಗ ವೈದ್ಯರು ಸೂಕ್ಷ್ಮವಾಗಿ ಆಕೆಯ ಆರೋಗ್ಯ ಸ್ಥಿತಿಯ ಮಾಹಿತಿಯನ್ನು ಪೋಷಕರಿಗೆ ನೀಡಿದ್ದರು.

ಶ್ರೀಜಾ, ಖ್ಯಾತ ಚಲನಚಿತ್ರ ನಟ ಪವನ್ ಕಲ್ಯಾಣ್ ಅವರ ಅಭಿನಯವನ್ನು ತುಂಬಾ ಇಷ್ಟಪಡುತ್ತಿದ್ದ ಕಾರಣ ಆಕೆಯ ಕೊನೆಗಾಲದಲ್ಲಾದರೂ ಅವರನ್ನು ಭೇಟಿ ಮಾಡಿಸಬೇಕೆಂದು ಬಯಸಿದ ಪೋಷಕರು ಎನ್.ಜಿ.ಓ. ಸಂಘಟನೆಯೊಂದರ ನೆರವಿನಿಂದ ಅವರನ್ನು ಸಂಪರ್ಕಿಸಿದ್ದರು. ನಟ ಪವನ್ ಕಲ್ಯಾಣ್ ಬಾಲಕಿಯ ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣವೇ ಆಸ್ಪತ್ರೆಗೆ ತೆರಳಿ ಆಕೆಯನ್ನು ನೋಡಿದ್ದರು. ಆದರೆ ಬಾಲಕಿ ಕೋಮಾದಲ್ಲಿದ್ದ ಕಾರಣ ಮಾತನಾಡಲಾಗಿರಲಿಲ್ಲ.

ಆಕೆಯ ಸ್ಥಿತಿಯನ್ನು ನೋಡಿ ಭಾವುಕರಾಗಿದ್ದ ಪವನ್ ಕಲ್ಯಾಣ್ 2 ಲಕ್ಷ ರೂ. ಗಳ ಚೆಕ್ ನೀಡಿ ಮರಳಿದ್ದರು. ಪವನ್ ಕಲ್ಯಾಣ್ ಭೇಟಿಯ ಫಲವೋ ಎಂಬಂತೆ ಬಾಲಕಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇದೀಗ ಎಲ್ಲರಂತೆ ಆರೋಗ್ಯವಾಗಿರುವ ಶ್ರೀಜಾ ಶಾಲೆಗೂ ಹೋಗುತ್ತಿದ್ದಾಳೆ. ಹೈದರಾಬಾದಿಗೆ ತೆರಳಿ ಪವನ್ ಕಲ್ಯಾಣ್ ಅವರನ್ನೂ ಭೇಟಿ ಮಾಡಿದ್ದು ಅವರೊಂದಿಗೆ ಮಾತನಾಡಬೇಕೆಂಬ ತನ್ನ ಮನದ ಬಯಕೆಯನ್ನು ಈಡೇರಿಸಿಕೊಂಡಿದ್ದಾಳೆ. ಪವನ್ ಕಲ್ಯಾಣ್ ಸಹ ಆಕೆಯೊಂದಿಗೆ ಎರಡು ಗಂಟೆಗಳ ಕಾಲ ಕಳೆದು ಊಟ ಮಾಡಿದ್ದಾರೆ. ಅಲ್ಲದೇ ಆಕೆಗಿಷ್ಟವಾದ ಗೊಂಬೆಗಳನ್ನೂ ಕೊಡಿಸಿದ್ದಾರೆ.

Write A Comment