ನವದೆಹಲಿ: ಐಪಿಎಲ್ ಹಗರಣದ ಆರೋಪಿ ಲಿಲಿತ್ ಮೋದಿ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸುತ್ತ ಗಿರಕಿ ಹೊಡೆಯುತ್ತಿದ್ದ ವಿವಾದ ಈಗ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಕೊರಳಿಗೆ ಬಲವಾಗಿ ಸುತ್ತಿಕೊಳ್ಳುತ್ತಿದೆ.
ವಿವಾದದಿಂದ ಕಂಗೆಟ್ಟಿದ್ದ ಮೋದಿ ಸರ್ಕಾರಕ್ಕೆ ಈಗ ಸಚಿವೆ ಸುಷ್ಮಾ ಸ್ವರಾಜ್ ಜೊತೆ ರಾಜೇ ಹೆಸರು ತಳಕುಹಾಕಿಕೊಂಡಿರುವುದು ಮತ್ತಷ್ಟು ಮುಜುಗರ ಉಂಟು ಮಾಡಿದೆ.
ಲಲಿತ್ ಮೋದಿ ಅವರು ವಸುಂಧರಾ ರಾಜೇ ಅವರ ಪುತ್ರ ಹಾಗೂ ಬಿಜೆಪಿ ಸಂಸದ ದುಶ್ಯಂತ ಒಡೆತನದ ಸಂಸ್ಥೆಗೆ 11.63 ಕೋಟಿ ರುಪಾಯಿ ವರ್ಗಾವಣೆ ಮಾಡಿರುವ ಸಂಗತಿ ಜಾರಿ ನಿರ್ದೇಶನಾಲಯ(ಇಡಿ)ದ ತನಿಖೆಯಿಂದ ಬಯಲಾಗಿದೆ.
ಮೋದಿ ಹಾಗೂ ಆತನ ಸಹಪಾಠಿಗಳ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಮೂಲಗಳ ಪ್ರಕಾರ, ಮಾರಿಶಸ್ ಮೂಲದ ವಿಲ್ಟನ್ ಇನ್ವೆಸ್ಟಮೆಂಟ್ ಲಿಮಿಟೆಡ್ ನಿಂದ ಲಲಿತ್ ಮೋದಿ ಒಡೆತನದ ಆನಂದ್ ಹೆರಿಟೇಜ್ ಹೋಟೆಲ್ಸ್ ಪ್ರೈ ಲಿ.ಗೆ ಸುಮಾರು 21 ಕೋಟಿ ರು. ಪಡೆದಿದೆ. ಈ ಹಣದಲ್ಲಿ ರಾಜೇ ಪುತ್ರ ದುಶ್ಯಂತ ಒಡೆತನದ ನಿಯಾಂತ್ ಹೆರಿಟೇಜ್ ಹೋಟೆಲ್ಸ್ ಪ್ರೈ ಲಿ.ಗೆ 11.63 ಕೋಟಿ ರುಪಾಯಿ ವರ್ಗಾವಣೆಯಾಗಿದೆ.
2008, ಏಪ್ರಿಲ್ ನಲ್ಲಿ ಈ ಹಣ ವರ್ಗಾವಣೆಯಾಗಿದ್ದು, ಮೋದಿ ದುಶ್ಯಂತ ಅವರ ಕಂಪನಿಗೆ ಮೊದಲು ಅಸುರಕ್ಷಿತ ಸಾಲವಾಗಿ 3.80 ಕೋಟಿ ವರ್ಗಾವಣೆ ಮಾಡಿದ್ದಾರೆ. ಬಳಿಕ ದುಶ್ಯಂತ ಕಂಪನಿಯಿಂದ ಎರಡು ಕಂತುಗಳಲ್ಲಿ 815 ಷೇರುಗಳನ್ನು ಖರೀದಿಸಿದ್ದಾರೆ. ಹೀಗೆ ಸಾಲ ಮತ್ತು ಷೇರು ಖರೀದಿಗಾಗಿ ಲಲಿತ್ ಮೋದಿ ದುಶ್ಯಂತ್ ಕಂಪನಿಗೆ ಒಟ್ಟು 11.63 ಕೋಟಿ ರುಪಾಯಿ ವರ್ಗಾವಣೆ ಮಾಡಿದ್ದಾರೆ.
