ರಾಷ್ಟ್ರೀಯ

ಮಾನವೀಯತೆ ಆಧಾರದಲ್ಲಿ ದಾವೂದ್‌ ಇಬ್ರಾಹಿಂಗೆ ಸಹಾಯ ಹಸ್ತ ನೀಡಿ: ಮೋದಿಗೆ ಕಾಂಗ್ರೆಸ್ ಟಾಂಗ್

Pinterest LinkedIn Tumblr

cong

ನವದೆಹಲಿ: ಮಾನವೀಯತೆಯ ಆಧಾರದ ಮೇಲೆ ಅಪರಾಧಿಗಳಿಗೆ ಕೇಂದ್ರ ಸರಕಾರ ಬೆಂಬಲ ಸೂಚಿಸುವ ನೀತಿಗಳನ್ನು ಪಾಲಿಸಿದಲ್ಲಿ, ಮುಂದೊಂದು ದಿನ ವಾಂಟೆಡ್ ಟೆರರಿಸ್ಟ್ ಭೂಗತ ದೊರೆ ದಾವುದ್ ಇಬ್ರಾಹಿಂಗೆ ಕೂಡಾ ಕೇಂದ್ರ ಸರಕಾರ ಸಹಾಯ ಹಸ್ತ ಚಾಚಬಹುದು ಎಂದು ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.

ಹವಾಲಾ ಹಗರಣದಲ್ಲಿ ಆರೋಪಿಯಾಗಿದ್ದ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಪ್ರಕರಣದಲ್ಲಿ ಸುಷ್ಮಾ ಸ್ವರಾಜ್ ಪಾತ್ರದ ಬಗ್ಗೆ ಮೋದಿ ಯಾಕೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಪ್ರಕರಣದ ಬಗ್ಗೆ ಪ್ರದಾನಮಂತ್ರಿ ನರೇಂದ್ರ ಮೋದಿ ಯಾವುದೇ ಹೇಳಿಕೆ ನೀಡದಿರುವುದನ್ನು ನೋಡಿದಲ್ಲಿ ಪ್ರಧಾನಿ ಕಚೇರಿಯೂ ಇದರಲ್ಲಿ ಶಾಮೀಲಾಗಿರಬಹುದು ಎನ್ನುವ ಶಂಕೆ ಕಾಡುತ್ತಿದೆ ಎಂದು ಆರೋಪಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಗೆ 11 ಪ್ರಸ್ನೆಗಳಿಗೆ ಉತ್ತರಿಸುವಂತೆ ಕೇಳಿರುವ ಕಾಂಗ್ರೆಸ್, ಪಾರದರ್ಶಕತೆ, ಭ್ರಷ್ಟಾಚಾರ ನಿರ್ಮೂಲನೆ, ಕಪ್ಪು ಹಣ ಮರಳಿ ತರುವ ಭರವಸೆಗಳು ಎಲ್ಲಿ ಹೋದವು? 700 ಕೋಟಿ ರೂಪಾಯಿ ಹವಾಲಾ ಹಗರಣದ ರೂವಾರಿ ಲಲಿತ್ ಮೋದಿಯಂತಹ ವ್ಯಕ್ತಿಗಳಿಗೆ ಬೆಂಬಲಿಸುವ ಸರಕಾರದಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ ಎಂದು ತಿರುಗೇಟು ನೀಡಿದೆ.

ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸೂರ್ಜೆವಾಲಾ ಮಾತನಾಡಿ, ಲಲಿತ್ (ಮೋದಿ)ಗೆ ಪ್ರಧಾನಿ ಮೋದಿ ಸಹಾಯ ಮಾಡುತ್ತಿದ್ದಾರೆಯೇ ಎಂದು ಜನತೆ ಕೇಳುತ್ತಿದ್ದಾರೆ. ಮಾನವೀಯತೆಯ ಆಧಾರದ ಮೇಲೆ ಲಲಿತ್ ಮೋದಿಗೆ ಬೆಂಬಲ ನೀಡಲಾಗಿದೆ ಎನ್ನುವ ಸುಷ್ಮಾ ಸ್ವರಾಜ್ ಹೇಳಿಕೆಯನ್ನು ತಳ್ಳಿಹಾಕಿದ ಅವರು, ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಲ್‌ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಲಲಿತ್ ಮೋದಿಯವರ ಸಂಪರ್ಕವಿದೆ ಎನ್ನುವದಕ್ಕೆ ಸಾಕ್ಷ್ಯಾಧಾರಗಳಿವೆ ಎಂದು ಗುಡುಗಿದ್ದಾರೆ.

Write A Comment