ರಾಷ್ಟ್ರೀಯ

ಲೈಂಗಿಕ ಕಿರುಕುಳದ ವಿರುದ್ಧ ಹೋರಾಡಿದ್ದಕ್ಕೆ ನೌಕರಿ ಕಳೆದುಕೊಂಡ ಆರ್ ಜೆ ದಂಪತಿ

Pinterest LinkedIn Tumblr

All-India-Radio

ಧರ್ಮಪುರಿ: ಚೆನ್ನೈ ಆಲ್ ಇಂಡಿಯಾ ರೇಡಿಯೋ ಕಚೇರಿಯಲ್ಲಿ ಕಾರ್ಯಕ್ರಮ ನಿರ್ವಾಹಕರೊಬ್ಬರು ಮಹಿಳೆಗೆ ನೀಡುತ್ತಿದ್ದ ಲೈಂಗಿಕ ಕಿರುಕುಳದ ವಿರುದ್ಧ ಹೋರಾಡಿದ್ದಕ್ಕೆ ದಂಪತಿಗಳನ್ನು ಕೆಲಸದಿಂದಲೇ ತೆಗೆದುಹಾಕಿರುವ ಘಟನೆ ಧರ್ಮಪುರಿಯಲ್ಲಿ ನಡೆದಿದೆ.

2004ರಲ್ಲಿ ಚೆನ್ನೈನ ಆಲ್ ಇಂಡಿಯಾ ರೇಡಿಯೋವಿನಲ್ಲಿ ರೇಡಿಯೋ ಜಾಕಿಯಾಗಿ ಸೇರ್ಪಡೆಗೊಂಡಿದ್ದ ಮಹಿಳೆಯೊಬ್ಬರು ನಂತರ ವಿವಾಹವಾದ ಬಳಿಕ ಧರ್ಮಪುರಿಯ ರೇಡಿಯೋ ಸ್ಟೇಷನ್ ಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಮಹಿಳೆ ಹಾಗೂ ಆಕೆಯ ಪತಿ ಇಬ್ಬರು ಒಂದೇ ರೇಡಿಯೋ ಸ್ಟೇಷನ್ ನಲ್ಲಿ ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದು. ಹಲವು ದಿನಗಳಿಂದ ಕಾರ್ಯನಿರ್ವಾಹಕ ಆರ್.ಮುರಳಿ ಅವರು ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪ ವ್ಯಕ್ತಪಡಿಸಿದ್ದಾರೆ.

ಹಲವು ದಿನಗಳಿಂದ ಕಾರ್ಯಕ್ರಮ ನಿರ್ವಾಹಕರು ಲೈಂಗಿಕ ಕಿರುಕುಳ ನೀಡುತ್ತಲೇ ಬಂದಿದ್ದು, ಮಾತನಾಡುವಾಗ ಅಶ್ಲೀಲ ಪದಗಳನ್ನು ಉಪಯೋಗಿಸುವುದು. ಮತ್ತು ಮಧ್ಯರಾತ್ರಿ ವೇಳೆ ಕರೆ ಮಾಡುವಂತೆ ಹೇಳುವುದು. ಕಚೇರಿಯಲ್ಲಿದ್ದಾಗ ಅಸಭ್ಯವಾಗಿ ವರ್ತಿಸುತ್ತಿದ್ದರು. ಅವರ ಈ ವರ್ತನೆಯಿಂದಾಗಿ  ಕೆಲವು ದಿನಗಳ ಹಿಂದೆಯೇ ಅವರೊಡನೆ ಮಾತನಾಡುವುದನ್ನು ನಿಲ್ಲಿಸಿದ್ದೆ. ಹೀಗಾಗಿ, ಸಹಕಾರ ನೀಡದಿದ್ದರೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದರು.

ಇದಕ್ಕೆ ಹೆದರಿದ ನಾನು ನಡೆದ ಘಟನೆಯನ್ನು ನನ್ನ ಪತಿಯ ಬಳಿ ಹೇಳಿಕೊಂಡಿದ್ದೆ. ನಂತರದ ದಿನಗಳಲ್ಲಿ ಕಾರ್ಯನಿರ್ವಾಹಕರ ವರ್ತನೆ ಬಗ್ಗೆ ಅವರ ಗಮನಕ್ಕೂ ಬಂತು. ಈ ಕುರಿತಂತೆ ಆಂತರಿಕ ಲೈಂಗಿಕ ಕಿರುಕುಳ ಸಮಿತಿಗೆ ದೂರು ನೀಡಲಾಯಿತು. ಕಾರ್ಯನಿರ್ವಾಹಕ ಆರ್. ಮುರಳಿ ಅಂಗವಿಕಲನಾಗಿದ್ದು, ತನಿಖೆ ನಡೆಸುತ್ತಿದ್ದ ಸಮಿತಿಯ ಬಳಿ ತಾನೊಬ್ಬ ಅಂಗವಿಕಲನಾಗಿದ್ದು, ತನ್ನದೇನು ತಪ್ಪಿಲ್ಲ ಎಂದು ಹೇಳಿ ಅನುಕಂಪಗಿಟ್ಟಿಸಿಕೊಂಡು ನಮ್ಮದೇ ತಪ್ಪು ಎಂದು ಪ್ರತಿಬಿಂಬಿಸಿದ್ದರು. ಅಲ್ಲದೆ, ನಮ್ಮಬ್ಬರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಹೇಳಿದ್ದಾರೆ.

ಕಚೇರಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ಘಟನೆ ಕುರಿತಂತೆ ಹಲವು ಬಾರಿ ಮೇಲಧಿಕಾರಿಗಳಿಗೆ ಎಷ್ಟೇ ಪತ್ರ ಬರೆದರೂ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ಕೂಡಲೇ ಮೇಲಧಿಕಾರಿಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಕೊಳ್ಳಬೇಕು ಎಂದು ದಂಪತಿಗಳು ಆಗ್ರಹಿಸಿದ್ದಾರೆ.

ಈ ಆರೋಪವನ್ನು ತಳ್ಳಿಹಾಕಿರುವ ಕಾರ್ಯಕ್ರಮ ಕಾರ್ಯನಿರ್ವಾಹಕ ಆರ್.ಮುರಳಿ, ಕಚೇರಿಗೆ ದಂಪತಿಗಳು ನಕಲಿ ವಿಳಾಸ ಪ್ರಮಾಣ ಪತ್ರವನ್ನು ಸಲ್ಲಿಸಿದಕ್ಕಾಗಿ ಅವರನ್ನು ಕೆಲಸದಿಂದ ತೆಗೆದುಹಾಕಲಾಯಿತು. ಈ ರೀತಿಯ ಆರೋಪಗಳನ್ನು ಮಾಡುವ ಮೂಲಕ ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ದಂಪತಿಗಳು ಪ್ರಯತ್ನ ಮಾಡುತ್ತಿವೆ ಎಂದು ಹೇಳಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ ಮತ್ತೊಬ್ಬ ಮಹಿಳೆಯೂ ಆರೋಪ ವ್ಯಕ್ತಪಡಿಸಿದ್ದು, ಕಚೇರಿಯಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಲೈಂಗಿಕ ಕಿರುಕುಳ ಕುರಿತಂತೆ ನಾನು ಸಹ ದೂರು ನೀಡಿದ್ದೆ. ದೂರು ನೀಡಿದ ಪರಿಣಾಮ ನಾನು ಕೆಲಸ ಕಳೆದುಕೊಂಡೆ ಎಂದು ಹೇಳಿದ್ದಾರೆ.

Write A Comment