ರಾಷ್ಟ್ರೀಯ

50 ವರ್ಷಗಳಿಂದ ಯುದ್ಧ ಮಾಡದೇ, ಸೇನೆ ಮಹತ್ವ ಕುಗ್ಗಿದೆ: ಪರಿಕರ್‌

Pinterest LinkedIn Tumblr

1212-2-2-MANOHAR-PARRIKAR

ಜೈಪುರ: ಕಳೆದ 40-50 ವರ್ಷಗಳಿಂದ ಯುದ್ಧವಾಗದೇ ದೇಶದಲ್ಲಿ ಸೇನೆಯ ಮಹತ್ವ ಕುಗ್ಗಿದೆ ಎಂಬ ಹೇಳಿಕೆ ನೀಡಿದ ಮರುಕ್ಷಣವೇ, ನನ್ನ ಮಾತಿನ ಅರ್ಥ ನಾವೀಗ ಯುದ್ಧ ಮಾಡಬೇಕು ಎಂದಲ್ಲ ಎಂದು ರಕ್ಷಣಾ ಸಚಿವ ಮನೋಹರ್‌ ಪರಿಕರ್‌ ಸ್ಪಷ್ಟನೆಯನ್ನೂ ನೀಡಿದ್ದಾರೆ.

‘ಎರಡು ತಲೆಮಾರಿನ ಅಧಿಕಾರಿಗಳು ಯುದ್ಧ ಕಾಣದೇ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಈ ಕಾರಣಕ್ಕೆ ಅವರಿಗೆ ಸಲ್ಲಬೇಕಾದ ಗೌರವ ನೀಡದಿರುವುದು ತರವಲ್ಲ. ತನ್ನ ಯೋಧರನ್ನು ರಕ್ಷಿಸಿಕೊಳ್ಳಲಾಗದ ದೇಶ ಅಭಿವೃದ್ಧಿ ಕಾಣಲಾಗದು,’ ಎಂದು ಜೈಪುರದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪರಿಕರ್‌ ಭಾನುವಾರ ತಿಳಿಸಿದ್ದರು. ಪ್ರಸಾರ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

‘ಯೋಧರ ಬಗ್ಗೆ ಜನರಲ್ಲಿ ಗೌರವ ಕಡಿಮೆ ಆಗಿರುವುದರಿಂದ ಅವರು ಸಂಕಷ್ಟ ಎದುರಿಸಬೇಕಾಗಿದೆ. ರಕ್ಷಣೆ ವಿಷಯವಾಗಿ ಹಲವು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಕೆಲವರು ಪತ್ರಕ್ಕೆ ಸ್ಪಂದಿಸಿದ್ದರೆ, ಇನ್ನು ಕೆಲವರು ನಿರ್ಲಕ್ಷಿಸಿದ್ದಾರೆ. ಇದಕ್ಕೆಲ್ಲಾ ಕಾರಣ ಕಳೆದ 40-50 ವರ್ಷಗಳಿಂದ ಯುದ್ಧ ಆಗದಿರುವುದು. ಹಾಗೆಂದು ನಾವೀಗ ಸಮರ ಸಾರಬೇಕಿಲ್ಲ. ಆದರೆ, ಯುದ್ಧ ಮಾಡದೇ ಸೇನೆ ತನ್ನ ಮಹತ್ವ ಕಳೆದುಕೊಳ್ಳುತ್ತದೆ,’ ಎಂದು ಪರಿಕರ್‌ ಹೇಳಿದ್ದಾರೆ.
ಮುಷರ್ರಫ್‌ ಕಾಲೆಳೆದ ರಾಥೋಡ್‌:

ಅಣ್ವಸ್ತ್ರಗಳಿರುವುದು ಹಬ್ಬಗಳಲ್ಲಿ ಸಿಡಿಸುವುದಕ್ಕಲ್ಲ ಎಂದಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ಅವರ ವಿರುದ್ಧ ರಾಥೋಡ್‌ ಕಿಡಿಕಾರಿದ್ದಾರೆ. ‘ಸ್ವಂತ ಮನೆಯೊಳಗೆ ಕಾಲಿಡಲು ಸಾಧ್ಯವಿಲ್ಲದ ಜನರಲ್‌ ಸಾಬ್‌, ಭಾರತ ಪ್ರವೇಶಿಸುವುದು ಹೇಗೆ,’ ಎಂದು ಪ್ರಶ್ನಿಸಿದ್ದಾರೆ. ‘ಎಲ್ಲೋ ಕೊಟ್ಟ ಪೆಟ್ಟು ಇನ್ನೆಲ್ಲಿಗೂ ತಗುಲಿದೆ. ಭಯೋತ್ಪಾದಕರಿಗೆ ನಾವು ಎಚ್ಚರಿಕೆ ನೀಡಿದ್ದೆವು. ಆದರೆ, ಅದಕ್ಕೆ ಉತ್ತರಿಸಿದ್ದು ಪಾಕಿಸ್ತಾನ,’ ಎಂದಿದ್ದಾರೆ. ಮಣಿಪುರದಲ್ಲಿ 18 ಯೋಧರ ಸಾವಿಗೆ ಕಾರಣರಾದ ಉಗ್ರರನ್ನು ಮ್ಯಾನ್ಮಾರ್‌ನಲ್ಲಿ ಹೊಡೆದುರುಳಿಸಿದಕ್ಕೆ ಪಾಕಿಸ್ತಾನ ಪ್ರತಿಕ್ರಿಯಿಸಿತ್ತು. ಈ ಹಿನ್ನೆಲೆಯಲ್ಲಿ ರಾಥೋಡ್‌ ಹೇಳಿಕೆ ನೀಡಿದ್ದಾರೆ.

Write A Comment