ರಾಷ್ಟ್ರೀಯ

ನಗರ ಪ್ರದೇಶಗಳಲ್ಲಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಳ

Pinterest LinkedIn Tumblr

Chaild-Labour

ನವದೆಹಲಿ, ಜೂ.12-ದೇಶದಲ್ಲಿ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಬಾಲಕಾರ್ಮಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು ಈ ಪೈಕಿ ಶೇ.50ಕ್ಕೂ ಹೆಚ್ಚಿನ ಮಕ್ಕಳು ವಾರದ ರಜೆಯೂ ಇಲ್ಲದೆ ದಿನಕ್ಕೆ 8 ಗಂಟೆ ಕಾಲ ದುಡಿಯುತ್ತಿದ್ದಾರೆ ಎಂಬ ಆಘಾತಕಾರಿ ವರದಿ ಸಮೀಕ್ಷೆಯಿಂದ ಬಹಿರಂಗವಾಗಿದೆ.

2001ರಿಂದ 2011ರ ಅವಧಿಯಲ್ಲಿ ದೇಶದ ನಗರಗಳಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಶೇ.53ರಷ್ಟು ಹೆಚ್ಚಿದ್ದು ವಾರ್ಷಿಕ ಶೇ.2.2ರಷ್ಟು ಬಾಲ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಹೀಗೇ ಮುಂದುವರೆದರೆ ಇನ್ನು ನೂರು ವರ್ಷಗಳಾದರೂ ಬಾಲಕಾರ್ಮಿಕ ಪದ್ಧತಿ ನಿವಾರಣೆಯಾಗಲಾರದು ಎಂದು ಚೈಲ್ಡ್ ರೈಟ್ಸ್ ಅಂಡ್ ಯು(ಸಿಆರ್‌ವೈ)ನ ನೀತಿ ಮತ್ತು ಸಂಶೋಧನಾ ನಿರ್ದೇಶಕ ಕೋಮಲ್ ಗನೋತ್ರಾ  ಕಳವಳ ವ್ಯಕ್ತಪಡಿಸಿದ್ದಾರೆ.

ನಗರ ಪ್ರದೇಶಗಳಲ್ಲಿ ಸರ್ಕಾರದ ಹಲವು ಕಾನೂನುಗಳ ನಡುವೆಯೂ ಬಾಲಕಾರ್ಮಿಕ ಪದ್ಧತಿ ಈ ರೀತಿ ಏರುಗತಿಯಲ್ಲಿ ಸಾಗುತ್ತಿರುವುದು ಅಪಾಯಕಾರಿ  ವಿಷಯವಾಗಿದೆ ಎಂದು ಕೋಮಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಮಕ್ಕಳ ಕಳ್ಳ ಸಾಗಣೆ ಕೂಡ ಹೆಚ್ಚುತ್ತಿದೆ. ಬಾಲ ಕಾರ್ಮಿಕರಲ್ಲಿ ಶೇ.80ರಷ್ಟು ಮಕ್ಕಳು ಕೃಷಿ ಮತ್ತಿತರ ವಿಭಾಗಗಳಲ್ಲಿ ಕೆಲಸ ಮಾಡುತ್ತಾರೆ. ಪ್ರತಿ ನಾಲ್ವರಲ್ಲಿ ಮೂವರು ಕೃಷಿಯಲ್ಲೇ ತೊಡಗಿದ್ದಾರೆ. ಜೊತೆಗೆ ಗೃಹ ಕೈಗಾರಿಕೆಗಳಲ್ಲೂ ಕೆಲಸ ಮಾಡುತ್ತಾರೆ. ಕಳೆದ 10 ವರ್ಷಗಳಲ್ಲಿ (2001-2011) 10 ರಿಂದ 14 ವರ್ಷ ವಯಸ್ಸಿನ ಮಕ್ಕಳು ದುಡಿಯುವುದು ಕಡಿಮೆಯಾಗಿದೆ. ಆದರೆ ಅದರ ಬದಲಿಗೆ 5 ರಿಂದ 9 ವರ್ಷದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಾರ್ಮಿಕರಾಗುತ್ತಿದ್ದಾರೆ. ಇದು ನಗರ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇವರಲ್ಲಿ ಗಂಡು ಮಕ್ಕಳ ಸಂಖ್ಯೆ ಶೇ.154ರಷ್ಟು ಏರಿಕೆಯಾಗಿದ್ದರೆ, ಬಾಲಕಿಯರ ಸಂಕ್ಯೆ ಮಾತ್ರ ಅತ್ಯಂತ ವೇಗವಾಗಿ ಅಂದರೆ, ಶೇ.240ರಷ್ಟು ಹೆಚ್ಚಿದೆ ಎಂಬುದು ಭಯಾನಕ ಸತ್ಯ ಎಂದು ಅವರು ತಮ್ಮ ವರದಿಯಲ್ಲಿ ಹೇಳಿದ್ದಾರೆ. ಇನ್ನೂ ಕುತೂಹಲಕರ ವಿಷಯವೆಂದರೆ, ದೇಶದಲ್ಲಿನ ಒಟ್ಟು ಬಾಲಕಾರ್ಮಿಕರು ಬಿಹಾರ, ಉತ್ತರಪ್ರದೇಶ, ರಾಜಸ್ಥಾನ್, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಈ ಐದು ರಾಜ್ಯಗಳಲ್ಲೇ ಕೇಂದ್ರಿತವಾಗಿರುವುದು ಈ ರಾಜ್ಯಗಳಲ್ಲಿ ಒಟ್ಟು 55 ಲಕ್ಷಕ್ಕೂ ಅಧಿಕ ಸಂಖ್ಯೆಯ ಬಾಲಕಾರ್ಮಿಕರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

Write A Comment