ರಾಷ್ಟ್ರೀಯ

ಆಪ್‌ನಿಂದ ತೋಮರ್ ಉಚ್ಚಾಟಿಸಲು ತೀರ್ಮಾನ

Pinterest LinkedIn Tumblr

Jintendra-Singh-Tomar

ನವದೆಹಲಿ, ಜೂ.12-ನಕಲಿ ಪದವಿ ಪ್ರಮಾಣ ಪತ್ರ ಹೊಂದಿದ ಆರೋಪದ ಮೇಲೆ ಬಂಧನಕ್ಕೊಳಪಟ್ಟಿರುವ ದೆಹಲಿ ಮಾಜಿ ಕಾನೂನು ಸಚಿವ ಜಿತೇಂದರ್‌ಸಿಂಗ್ ತೋಮರ್ ಅವರನ್ನು ಆಮ್‌ಆದ್ಮಿ ಪಕ್ಷದಿಂದ ಉಚ್ಚಾಟಿಸಲು  ತೀರ್ಮಾನಿಸಲಾಗಿದೆ. ತೋಮರ್ ಪ್ರಕರಣದಿಂದ ಎಎಪಿ ಪಕ್ಷದ ವರ್ಚಸ್ಸಿಗೆ ರಾಷ್ಟ್ರಮಟ್ಟದಲ್ಲಿ ತೀವ್ರ ಹಿನ್ನಡೆಯಾಗಿದೆ.

ಈ ಹಿನ್ನೆಲೆಯಲ್ಲಿ ಅವರನ್ನು  ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಲು ನಾಯಕರು ಮುಂದಾಗಿದ್ದಾರೆ. ಕಳೆದ ತಡರಾತ್ರಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಕ್ಷದ ಕೆಲ ಮುಖಂಡರ ಜತೆ ಮಾತುಗೆ ನಡೆಸಿದ್ದಾರೆ. ತೋಮರ್ ಪ್ರಕರಣದಿಂದ ಅವರು ತೀವ್ರ ಅಸಮಾಧಾನಗೊಂಡಿದ್ದು, ಪಕ್ಷದಿಂದ ಉಚ್ಚಾಟಿಸಲು ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಒಂದೆರಡು ದಿನಗಳಲ್ಲಿ ತೋಮರ್ ಉಚ್ಚಾಟಿಸುವುದು ಖಚಿತವಾಗಿದೆ.  ಈ ಪ್ರಕರಣವನ್ನು ಇನ್ನಷ್ಟು ಬೆಳೆಸದೆ ಪಕ್ಷಕ್ಕೆ ಆಗಿರುವ ಹಾನಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಆಪ್ ಈ ಕ್ರಮ ಕೈಗೊಂಡಿದೆ.  ಆರ್‌ಟಿಐ ಅರ್ಜಿಯಲ್ಲಿ ತೋಮರ್ ತಾನು ಅತ್ಯಂತ ನಿಷ್ಠಾವಂತ ಮತ್ತು ಅಮಾಯಕ ಎಂದು ಕೇಜ್ರಿವಾಲ್ ಮುಂದೆ ಹೇಳಿಕೊಂಡಿದ್ದ. ಅಲ್ಲದೆ, ತನಗೆ ಉತ್ತರ ಪ್ರದೇಶದ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯೂ ಸಹ ಬಂದಿದೆ ಎಂದು ಬೂಸಿ ಬಿಟ್ಟಿದ್ದ. ಈ ಬೆಳವಣಿಗೆಗಳಿಂದ ಅರವಿಂದ್ ಕೇಜ್ರಿವಾಲ್ ತೀವ್ರ ಅಸಮಾಧಾನಗೊಂಡಿದ್ದು, ತಾನು ಯಾರ ಮೇಲೆ ನಂಬಿಕೆ ಇಟ್ಟಿರುತ್ತೇನೋ ಅಂಥವರೇ ಮೋಸ ಮಾಡುತ್ತಾರೆ. ಇಂಥವರು ನಮ್ಮ ಪಕ್ಷದಲ್ಲಿ ಇರಲೇಬಾರದು ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಉತ್ತರ ಪ್ರದೇಶದ ಫೈಜಾಬಾದ್ ಕಾಲೇಜು ವಿದ್ಯಾರ್ಥಿಯಾಗಿರದೆ ತಾನು ಅಲ್ಲಿಂದಲೇ ಪದವಿ ಪಡೆದಿದ್ದೇನೆ ಎಂದು ತೋಮರ್ ಸುಳ್ಳು ಹೇಳಿಕೊಂಡಿದ್ದ. ಈಗ ಒಂದೊಂದೇ ನಿಜಾಂಶಗಳು ಹೊರ ಬೀಳುತ್ತಿರುವುದರಿಂದ ಎಎಪಿಗೆ ಈ ಪ್ರಕರಣ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಬ್ಬ ಕಾನೂನು ಸಚಿವನ ಮೇಲೆ ಪೊಲೀಸರು ವಂಚನೆ, ಮೋಸ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ದೆಹಲಿ ಹೈಕೋರ್ಟ್ ತೋಮರ್‌ಗೆ ಜಾಮೀನು ನೀಡಲು ನಿರಾಕರಿಸಿದೆ. ಹೀಗಾಗಿ ತೋಮರ್‌ಗೆ ಪಕ್ಷದಿಂದಲೇ ಗೇಟ್‌ಪಾಸ್ ನೀಡಲು ಎಎಪಿ ತೀರ್ಮಾನಿಸಿದೆ. ಯಾವುದೇ ಕ್ಷಣದಲ್ಲೂ ಆದೇಶ ಹೊರ ಬೀಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.  ಫೈಜಾಬಾದ್ ವಿಶ್ವವಿದ್ಯಾಲಯ  ತೋಮರ್ ನಮ್ಮ ವಿದ್ಯಾರ್ಥಿಯಲ್ಲ. ಆತನಿಗೆ ಯಾವುದೇ ರೀತಿಯ ಪದವಿ ಪ್ರಮಾಣ ಪತ್ರ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ದಿನದಿಂದ ದಿನಕ್ಕೆ ಪಕ್ಷದ ವರ್ಚಸ್ಸು ಕುಸಿಯುತ್ತಿರುವ ಕಾರಣ ಕೇಜ್ರಿವಾಲ್ ಉಚ್ಚಾಟಿಸುವಂತಹ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

Write A Comment