ರಾಷ್ಟ್ರೀಯ

ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸಮರ್ಥ ಶಿಕ್ಷಕರ ಅಗತ್ಯವಿದೆ: ಪ್ರಣಬ್ ಮುಖರ್ಜಿ

Pinterest LinkedIn Tumblr

pranab

ನವದೆಹಲಿ:ಇಂದು ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಗುಣಮಟ್ಟವಿರುವ  ಶಿಕ್ಷಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಕೊರತೆ ಕಂಡುಬರುತ್ತಿದ್ದು, ನಮ್ಮ ದೇಶಕ್ಕೆ ದೊಡ್ಡ ಸವಾಲಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆತಂಕ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ  ಒಂದು ವಾರಗಳ ಕಾಲ ನಡೆಯುತ್ತಿರುವ ‘ ಇನ್ ರೆಸಿಡೆನ್ಸ್ ‘ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕೇಂದ್ರ ವಿಶ್ವವಿದ್ಯಾಲಯಗಳ 31 ಶಿಕ್ಷಕರನ್ನು ಭೇಟಿ ಮಾಡಿ ಮಾತನಾಡಿದ ಅವರು, ಶಿಕ್ಷಕರು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಸಿಕೊಳ್ಳದಿದ್ದರೆ ನಮ್ಮ ದೇಶದ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯುವ ಶಿಕ್ಷಕರ ಅಗತ್ಯವಿದೆ ಎಂದು ಹೇಳಿದರು.

” ನಿಜವಾದ ಶಿಕ್ಷಕ ತನ್ನನ್ನು ಸೇತುವೆಗೆ ಹೋಲಿಸಿ, ಅದನ್ನು ದಾಟಿ ಮುಂದಕ್ಕೆ ಹೋಗಲು ತನ್ನ ವಿದ್ಯಾರ್ಥಿಗೆ ಅಹ್ವಾನ ನೀಡುತ್ತಾನೆ.ವಿದ್ಯಾರ್ಥಿ ತನ್ನನ್ನು ದಾಟಿ ಹೋದರೆ ಸಂತೋಷದಿಂದ ಕುಸಿದು ಬೀಳುತ್ತಾನೆ ಮತ್ತು ವಿದ್ಯಾರ್ಥಿಯಲ್ಲಿ ಸ್ವಂತಿಕೆ ಬೆಳೆಯಲು ಪ್ರೋತ್ಸಾಹ ನೀಡುತ್ತಾನೆ” ಎಂಬ ಗ್ರೀಕ್ ನ ತತ್ವಜ್ಞಾನಿ ಹಾಗೂ ಬರಹಗಾರ ನಿಕೊಸ್ ಕಜನ್ಜಕಿಸ್ ಅವರು ಹೇಳಿದ ಮಾತನ್ನು ರಾಷ್ಟ್ರಪತಿಗಳು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಒಬ್ಬ ಪ್ರೇರಣೆ ನೀಡುವ ಶಿಕ್ಷಕ ವಿದ್ಯಾರ್ಥಿಯ ವೈಯಕ್ತಿಕ ಗುರಿಯನ್ನು ಸಾಮಾಜಿಕ ಮತ್ತು ರಾಷ್ಟ್ರೀಯ ಗುರಿಗಳಿಗೆ ಸಂಪರ್ಕಿಸುತ್ತಾರೆ. ಹೀಗೆ ಪ್ರೇರಣೆ ನೀಡುವ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸಬೇಕು.ಇದರಿಂದ ಶಿಕ್ಷಕರಿಗೂ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದು ಹೇಳಿದರು.

ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದ್ದರೂ,ಶಿಕ್ಷಣದ ಗುಣಮಟ್ಟ ಮಾತ್ರ ಅಭಿವೃದ್ಧಿಗೊಂಡಿಲ್ಲ ಎಂದು ರಾಷ್ಟ್ರಪತಿಗಳು ಇದೇ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.ಹಿಂದಿನ ಕಾಲದಲ್ಲಿ, ಭಾರತ ದೇಶವು ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸುವ ನೆಲೆಯಾಗಿತ್ತು. ನಳಂದಾ, ತಕ್ಷಶಿಲಾ, ವಿಕ್ರಮಶಿಲ,ವಲಭಿ, ಸೋಮಾಪುರ ಮತ್ತು ಒಡಂತಪುರಿ ಮೊದಲಾದ ವಿಶ್ವವಿದ್ಯಾಲಯಗಳು ದೀರ್ಘಕಾಲದವರೆಗೆ ಪ್ರಾಬಲ್ಯ ಹೊಂದಿದ್ದವು. ಆದರೆ ಇಂದು ಪ್ರತಿಭಾವಂತ ಭಾರತೀಯ ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗುವುದರಿಂದ ಪ್ರತಿಭಾವಂತರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ನಮ್ಮ ದೇಶದ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಅಮರ್ತ್ಯ ಸೇನ್, ಹರ್ ಗೋಬಿಂದ್ ಕುರಾನಾ, ಸುಬ್ರಮಣ್ಯಂ ಚಂದ್ರಶೇಖರ್ ಮೊದಲಾದವರು ಭಾರತದಲ್ಲಿ ಶಿಕ್ಷಣ ಮುಗಿಸಿ ಉನ್ನತ ಶಿಕ್ಷಣಕ್ಕೆ ವಿದೇಶಗಳಿಗೆ ಹೋದರು. ಈ ಪರಿಸ್ಥಿತಿ ಬದಲಾಗಿ ನಮ್ಮ ದೇಶದಲ್ಲಿಯೇ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು ಎಂದು ಆಶಿಸಿದರು.

Write A Comment