ರಾಷ್ಟ್ರೀಯ

ಯೋಗ ಕೂಡಿ ಬಂತು!” ಅಂತಾರಾಷ್ಟ್ರೀಯ ಯೋಗ ದಿನಕ್ಕೆ ದಾರುಲ್ ಉಲೂಮ್ ಬೆಂಬಲ

Pinterest LinkedIn Tumblr

darul-ulum

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಕ್ಕೆ ದಾರುಲ್ ಉಲೂಮ್ ದಿಯೋಬಂದ್ ಮುಸ್ಲಿಂ ಸಂಘಟನೆ ಬೆಂಬಲ ನೀಡಿದೆ. ಯೋಗವೊಂದು ದೈಹಿಕ ಕಸರತ್ತಿನ ಭಾಗವಾಗಿದ್ದು, ಅದನ್ನು ಯಾವುದೇ ಧರ್ಮದ ಜೊತೆ ತಳಕು ಹಾಕಬಾರದು ಎಂದು ಹೇಳಿದೆ.

ಉತ್ತರ ಪ್ರದೇಶದ ಸಹರನ್ ಪುರ ಜಿಲ್ಲೆಯಲ್ಲಿರುವ ದಿಯೋಬಂದ್ ಪಟ್ಟಣದಲ್ಲಿ ದಾರುಲ್ ಉಲೂಮ್ ಎಂಬ ಪ್ರಮುಖ ಇಸ್ಲಾಮಿಕ್ ವಿಶ್ವವಿದ್ಯಾಲಯವಾಗಿದ್ದು, ಅಲ್ಲಿ ದಿಯೋಬಂದಿ ಇಸ್ಲಾಮಿಕ್ ಚಳವಳಿ ಆರಂಭವಾಯಿತು.

ದಾರುಲ್ ಉಲೂಮ್ ಸಂಘಟನೆ, ಮುಸಲ್ಮಾನರು ಯೋಗ ಅಭ್ಯಾಸ ಮಾಡಬಾರದು ಎಂದು ಯಾವುದೇ ಫತ್ವಾ ಹೊರಡಿಸಿಲ್ಲ ಎಂದು  ಸ್ಪಷ್ಟಪಡಿಸಿದೆ. ಅದರ ನಿಯೋಗ ಇಂದು ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಅವರನ್ನು ಭೇಟಿ ಮಾಡಿ, ಯೋಗ ದಿನದ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದೆ.

ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಚಿವ ಶ್ರೀಪಾದ್ ನಾಯ್ಕ್ ,ಮುಸಲ್ಮಾನರ ನಿಯೋಗ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ ಎಂದು ದೃಢಪಡಿಸಿದ್ದಾರೆ.

ಶಾಲೆಗಳಲ್ಲಿ ಯೋಗ ತರಗತಿಯನ್ನು ಕಡ್ಡಾಯಗೊಳಿಸುವುದನ್ನು, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೇರಿದಂತೆ ಕೆಲವು ಅಲ್ಪಸಂಖ್ಯಾತ ಗುಂಪುಗಳು ವಿರೋಧಿಸಿದ್ದವು. ಯೋಗ ದಿನ ಆಚರಣೆ ಬಗ್ಗೆ ವ್ಯಾಪಕ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದರಿಂದ  ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿಲ್ಲ. ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ”ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ, ಯೋಗಾಭ್ಯಾಸ ಮಾಡುವುದನ್ನು ಯಾವುದೇ ಜಾತಿ, ಮತ, ಧರ್ಮಕ್ಕೆ ಸೇರಿಸಬೇಡಿ” ಎಂದು ಅವರು ಮನವಿ ಮಾಡಿದ್ದಾರೆ.

ಶಾಲೆಗಳಲ್ಲಿ ಸೂರ್ಯ ನಮಸ್ಕಾರ ಮತ್ತು ಯೋಗವನ್ನು ಕಡ್ಡಾಯಗೊಳಿಸುವುದರ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಭಿಯಾನ ಕೈಗೊಳ್ಳುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ”ಮಂಡಳಿಯ ನಿಲುವಿಗೆ ನಾನು ಪ್ರತಿಕ್ರಿಯಿಸುವುದಿಲ್ಲ, ಯೋಗವನ್ನು ಯಾವುದೇ ಜಾತಿ, ಧರ್ಮದ ಜೊತೆ ಸೇರಿಸಬೇಡಿ ಎಂದು ನಾನು ಹೇಳಲು ಬಯಸುತ್ತೇನೆ. ಯೋಗ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಒಳ್ಳೆಯದು” ಎಂದು ಪ್ರತಿಕ್ರಿಯಿಸಿದರು.

ಭಾರತ ದೇಶದಲ್ಲಿ ಸುಮಾರು 140 ದಶಲಕ್ಷ ಮಂದಿ ಮುಸಲ್ಮಾನರಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ರಾಜಧಾನಿ ದೆಹಲಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

Write A Comment