ರಾಷ್ಟ್ರೀಯ

ಅಪರೇಷನ್ ಬ್ಲೂಸ್ಟಾರ್ ವಾರ್ಷಿಕೋತ್ಸವದ ವೇಳೆ ಮಾರಾಮಾರಿ

Pinterest LinkedIn Tumblr

Operation-bhlue

ಅಮೃತಸರ(ಪಂಜಾಬ್),ಜೂ.7: ಅಪರೇಷನ್ ಬ್ಲೂಸ್ಟಾರ್‌ನ 31ನೇ ವಾರ್ಷಿಕ ದಿನಾಚರಣೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು, ಹಲವರು ಗಾಯಗೊಂಡು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಘಟನೆ ಅಮೃತಸರದಲ್ಲಿಂದು ನಡೆದಿದೆ.

ಘಟನೆಯಲ್ಲಿ 5ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಮೃತಸರದಲ್ಲಿರುವ ಸ್ವರ್ಣಮಂದಿರ ಸುತ್ತಮುತ್ತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಘಟನೆ ಹಿನ್ನೆಲೆ: ಅಮೃತಸರದಲ್ಲಿರುವ ಸ್ವರ್ಣ ಮಂದಿರ ಬಳಿ ಆಪರೇಷನ್ ಬ್ಲೂಸ್ಟಾರ್‌ನ 31ನೇ ವಾರ್ಷಿಕೋತ್ಸವವನ್ನು ಖಲಿಸ್ತಾನ್ ಪರ ಬೆಂಬಲಿತ 22 ಮಂದಿ ಸಿಖರು ಘೋಷಣೆ ಕೂಗಿದ್ದೇ ಈ ಘರ್ಷಣೆ ಕಾರಣವಾಗಿದೆ. ಖಲಿಸ್ಥಾನ್ ಬೆಂಬಲಿತ ಕಾರ್ಯಕರ್ತರು ಘೋಷಣೆ ಕೂಗಿದ್ದಕ್ಕೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಕೈಯಲ್ಲಿದ್ದ ಬಡಿಗಿಯಲ್ಲಿ ಬಡಿದಾಡಿಕೊಂಡು, ಕಲ್ಲು ತೂರಾಟ ನಡೆಸಿದ್ದರಿಂದ 5 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಸ್ವರ್ಣ ಮಂದಿರ ಮತ್ತು ಅಕಲ್‌ತಖ್ತ್ ಮಂದಿರದ ಬಳಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದ್ದು , ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧರಾಗಿದ್ದೇವೆ ಎಂದು ಅಮೃತಸರದ ಉಪಪೊಲೀಸ್ ಆಯುಕ್ತ ಪ್ರಾಪಂಲ್ ಸಿಂಗ್ ತಿಳಿಸಿದ್ದಾರೆ.

ಸ್ವರ್ಣಮಂದಿರ ಬಳಿ ಬಂದು ಖಲಿಸ್ತಾನ್ ಪರ ಘೋಷಣೆ ಕೂಗಿದ್ದು ಸರಿಯಲ್ಲ. ಈ ಹಿನ್ನೆಲೆಯಲ್ಲಿ 22 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳ ಕೈವಾಡವನ್ನು ತಳ್ಳಿ ಹಾಕುವಂತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಎಸ್‌ಜಿಪಿಸಿ ಅಧ್ಯಕ್ಷ ಅವತಾರ್ ಸಿಂಗ್ ಮಕರ್ ಹೇಳಿರುವಂತೆ ಕೆಲ ಸಮಾಜಘಾತುಕ ಶಕ್ತಿಗಳು ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದ್ದಾರೆ. ಇದಕ್ಕೆ ನಮ್ಮ ಸಮಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಬೇಕು. ಯಾರೊಬ್ಬರು ಭಯಭೀತರಾಗಬಾರದು ಎಂದು ಮನವಿ ಮಾಡಿದ್ದಾರೆ.

1984ರಲ್ಲಿ ಪ್ರತ್ಯೇಕ ಖಲಿಸ್ತಾನ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಜರ್ನಲ್ ಸಿಂಗ್ ಮತ್ತು ಆತನ ಬೆಂಬಲಿಗರು ಸಿಖರ ಪವಿತ್ರ ಮಂದಿರ ಸ್ವರ್ಣ ಮಂದಿರವನ್ನು ಒತ್ತೆ ಇಟ್ಟುಕೊಳ್ಳಲು ಮುಂದಾಗಿದ್ದರು. ಇವರನ್ನು ತೆರವುಗೊಳಿಸಲು ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಎನ್‌ಎಸ್‌ಜಿ ಕಮಾಂಡೋ ಮೂಲಕ ದಾಳಿ ನಡೆಸಿದ್ದರು. ಇದನ್ನೇ ಆಪರೇಷನ್ ಬ್ಲೂಸ್ಟಾರ್ ಎಂದು ಕರೆಯುತ್ತಾರೆ.

Write A Comment