ರಾಷ್ಟ್ರೀಯ

ಪೆಟ್ರೋಲ್ ಬಂಕ್, ಮದ್ಯದಂಗಡಿ, ಕೇಬಲ್ ಮಾಲೀಕರಿಗೆ ಉಗ್ರರ ಗಡುವು : ಕಣಿವೆ ಜನರಲ್ಲಿ ಭೀತಿ

Pinterest LinkedIn Tumblr

Terror-DeadLine

ಶ್ರೀನಗರ, ಜೂ.6- ಪೆಟ್ರೋಲ್ ಬಂಕ್ ಮಾಲೀಕರು, ಮದ್ಯದಂಗಡಿಗಳ ಮಾಲೀಕರು ಹಾಗೂ ಕೇಬಲ್ ಆಪರೇಟರ್‌ಗಳಿಗೆ ಜೀವ ಬೆದರಿಕೆ ಹಾಕಿರುವ ತೆಹ್ರಿಕ್-ಎ-ತಾಲಿಬನ್ ಉಗ್ರ ಸಂಘಟನೆಯ ಪೋಸ್ಟರ್‌ಗಳನ್ನು ನಿಗೂಢವಾಗಿ ಹಚ್ಚಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ಜಮ್ಮುಕಾಶ್ಮೀರ ಜನತೆಯನ್ನು ಭಯಭೀತರನ್ನಾಗಿಸಿದೆ.

ಪ್ರತಿಯೊಬ್ಬರೂ ಇಸ್ಲಾಮಿಕ್ ಮೌಲ್ಯಗಳನ್ನು ಗೌರವಿಸಬೇಕು ಮತ್ತು ಆಚರಿಸಬೇಕು ಇಲ್ಲವಾದರೆ ಪರಿಸ್ಥಿತಿ ಎದುರಿಸಬೇಕಾದೀತು. ಉರ್ದು ಭಾಷೆಯಲ್ಲಿ ಕೈ ಬರಹದಲ್ಲಿರುವ ಪೋಸ್ಟರ್‌ಗಳನ್ನು ರಾತ್ರೋರಾತ್ರಿ ಹಚ್ಚಲಾಗಿದೆ.  ಪೊಲೀಸರು, ಭದ್ರತಾ ಪಡೆ ವಾಹನಗಳಿಗೆ ತೈಲ ಒದಗಿಸುವ ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು. ಮದ್ಯ, ಮಾದಕ ವಸ್ತು ಮಾರಾಟ ಮಾಡುವವರನ್ನು ಜೀವ ಸಹಿತ ಉಳಿಯಗೊಡುವುದಿಲ್ಲ. ಇವರೇ ಅಲ್ಲದೆ ಕೇಬಲ್ ಆಪರೇಟರ್‌ಗಳ ವಿರುದ್ದವೂ ಸೂಕ್ತ ಕ್ರಮ ಕೈಗೊಳ್ಳಲಿದ್ದೇನೆ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.

ರಾಜ್ಯದ ಸೊಪೋರಾ ಜಿಲ್ಲೆಯಲ್ಲಿ ದೂರವಾಣಿ ಟವರ್‌ಗಳನ್ನು ಧ್ವಂಸ ಮಾಡಿದ್ದ ಇಬ್ಬರು ತಾಲಿಬನ್ ಉಗ್ರರು ಭದ್ರತಾ ಪಡೆ ಗುಂಡಿಗೆ ಬಲಿಯಾದ ಘಟನೆ ಕಳೆದ ವಾರಷ್ಟೇ ನಡೆದಿತ್ತು.  ಹೊರಗಿನಿಂದ ಬರುವವರಿಗೆ ಮನೆಗಳನ್ನು ಬಾಡಿಗೆ ಕೊಡುವವರನ್ನು ಉಳಿಸುವುದಿಲ್ಲ. ಇನ್ನು ಒಂದು ವಾರದೊಳಗಾಗಿ ನಾವು ಹೇಳಿದಂತೆ ಮಾಡಬೇಕು. ಆಮೇಲೆ ನಾವು ಜವಾಬ್ದಾರರಲ್ಲ ಎಂದು ಪೋಸ್ಟರ್‌ನಲ್ಲಿ ಗಡುವು ನೀಡಲಾಗಿದೆ.  ರಾಜ್ಯದಲ್ಲಿ ಈ ರೀತಿ ತಾಲಿಬನ್ ಉಗ್ರರು ಪೋಸ್ಟರ್ ಹಚ್ಚುತ್ತಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಕೆ.ರಾಜೇಂದ್ರಕುಮಾರ್ ತಿಳಿಸಿದ್ದಾರೆ.   ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು ತನಿಖೆ ಮುಂದುವರೆದಿದೆ.

Write A Comment