ರಾಷ್ಟ್ರೀಯ

ಮುಂಗಾರು ಕೊರತೆ: ದೇಶಾದ್ಯಂತ ಕ್ಷಾಮ ಭೀತಿ; ಇಂದು ಕೇಂದ್ರ ತುರ್ತು ಸಭೆ

Pinterest LinkedIn Tumblr

Monsoon-clouds

ಹೊಸದಿಲ್ಲಿ : ಅಕಾಲಿಕ ಮಳೆಯಿಂದ ಈ ಬಾರಿಯ ಬೇಸಿಗೆ ಬೇಗೆ ಕೊಂಚ ಕಡಿಮೆಯಾಗಿತ್ತೆಂದು ಸಂತಸ ಪಡುತ್ತಿರುವಾಗಲೇ ಜನರಿಗೆ ಬರಸಿಡಿಲಿನಂಥ ಸುದ್ದಿ ಬಂದಿದೆ. ಈ ವರ್ಷ ಮುಂಗಾರು ನಿರಾಶಾದಾಯಕವಾಗಲಿದ್ದು ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಈ ಬಾರಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯುವುದಿಲ್ಲ. ಹೀಗಾಗಿ ದೇಶದ ಹಲವೆಡೆ ಬರಗಾಲ ಉಂಟಾಗಬಹುದು ಎಂದು ಕೇಂದ್ರ ಸರಕಾರ ಹೇಳಿದೆ.

”ಈ ವರ್ಷದ ವಾಡಿಕೆ ಮಳೆಯಲ್ಲಿ(ಶೇ.93) ಶೇ.5ರಷ್ಟು ಕೊರತೆಯಾಗಲಿದ್ದು, ಶೇ.88ರಷ್ಟು ಮಳೆ ಬೀಳುವ ನಿರೀಕ್ಷೆ ಇದೆ. ಇದನ್ನು ಅತ್ಯಂತ ಭಾರವಾದ ಹೃದಯದಿಂದ ಹೇಳುತ್ತಿರುವೆ,” ಎಂದು ಕೇಂದ್ರ ಭೂ ವಿಜ್ಞಾನ ಸಚಿವ ಹರ್ಷ ವರ್ಧನ್ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಶೇ 93 ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ ಮಂಗಳವಾರ ತನ್ನ ಮುನ್ಸೂಚನೆಯನ್ನು ಪರಿಷ್ಕರಿಸಿ, ಈ ಬಾರಿ ಮಳೆಪ್ರಮಾಣ ಶೇ. 88 ದಾಟುವುದಿಲ್ಲ ಎಂದು ಹೇಳಿದೆ.

ಶೇ.90ಕ್ಕಿಂತ ಕಡಿಮೆ ಮಳೆಯನ್ನು ಬರ ಎಂದೇ ಪರಿಗಣಿಸಲಾಗುತ್ತದೆ. ಆದರೆ ಬರಗಾಲದ ವರ್ಷಕ್ಕಿಂತಲೂ ಶೇ.2ರಷ್ಟು ಕಡಿಮೆ ಮಳೆ ಮನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದು ಕೃಷಿ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ದೇಶದ ಕೃಷಿ ವಲಯ ನಾನಾ ಸಮಸ್ಯೆಗಳಿಂದ ಬೇಯುತ್ತಿದೆ. ಕೆಲ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಿದೆ. ಈಗ ಸಿಕ್ಕಿರುವ ಮಳೆ ಮುನ್ಸೂಚನೆ ರೈತರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಲಿದೆ.

ಭವಿಷ್ಯದ ದಿನಗಳ ಬಗ್ಗೆ ಕೇಂದ್ರ ಸರಕಾರವೂ ಚಿಂತಾಕ್ರಾಂತಗೊಂಡಿದ್ದು , ”ಮುಂಗಾರು ಮಳೆ ಕಡಿಮೆಯಾದರೆ, ದೇಶದ ಅರ್ಧದಷ್ಟು ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗುವುದಿಲ್ಲ,” ಎಂದು ಹರ್ಷ ವರ್ಧನ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ನಮಗೆ ಸಿಕ್ಕಿರುವ ಮುನ್ಸೂಚನೆ ಆತಂಕ ತಂದಿದೆ. ಈಗಾಗಲೇ ನೈರುತ್ಯ ಮುಂಗಾರು ಪ್ರವೇಶ ಒಂದು ವಾರ ತಡವಾಗಿದೆ. ಭಾರತದಲ್ಲಿ ಮುಂಗಾರು ಎಂಬುದು ಸಾಗರ, ವಾತಾವರಣ ಮತ್ತು ಭೂ ಗುಣದ ಮೇಲೆ ಅವಲಂಬಿತವಾಗಿದೆ. ಹವಾಮಾನ ವೈಪರೀತ್ಯ ಮತ್ತು ಚಂಚಲ ವಾತಾವರಣದ ಕುರಿತು ಅನೇಕ ತಜ್ಞರು ಮಾತನಾಡಿದ್ದಾರೆ. ಬಿಸಿ ಮಾರುತಕ್ಕೆ ನೂರಾರು ಮಂದಿ ಸತ್ತಿರುವುದಕ್ಕೂ ಮುಂಗಾರು ವಿಫಲವಾಗುತ್ತಿರುವುದಕ್ಕೂ ಸಂಬಂಧವಿಲ್ಲ ಎಂದು ಹೇಳುವುದರ ಮೂಲಕ ನಮ್ಮನ್ನು ನಾವು ಮೂರ್ಖರನ್ನಾಗಿಸಿಕೊಳ್ಳುವುದು ಬೇಡ,” ಎಂದು ಅವರು ಪ್ರತಿಪಾದಿಸಿದ್ದಾರೆ.ನಾನೊಬ್ಬ ವಿಜ್ಞಾನ ಗೊತ್ತಿರುವ ವ್ಯಕ್ತಿ. ಕಳೆದ ವರ್ಷ ಈಶಾನ್ಯ ಹಾಗೂ ವಾಯವ್ಯ ಮುಂಗಾರು ಕೈ ಕೊಟ್ಟಿದ್ದರ ಬಗ್ಗೆ ಕುರುಡಾಗಿ ಇರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ವಾಡಿಕೆಗಿಂತಲೂ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈ ಮೊದಲೂ ಹೇಳಿತ್ತು. ಪರಿಸ್ಥಿತಿ ಎದುರಿಸಲು ಕೇಂದ್ರ ಸರಕಾರ ಸಜ್ಜಾಗುತ್ತಿದ್ದಂತೆಯೇ, ಮಾರ್ಚ್-ಏಪ್ರಿಲ್‌ನಲ್ಲಿ ಅಕಾಲಿಕ ಮಳೆ ಮತ್ತು ಆಲಿಕಲ್ಲು ಯರ‌್ರಾಬಿರ‌್ರಿ ಸುರಿದು ಅಪಾರ ಬೆಳೆ ಮತ್ತು ಆಸ್ತಿಪಾಸ್ತಿ ನಷ್ಟವಾಗಿತ್ತು. ಈ ಸಂಕಷ್ಟವನ್ನು ನಿಭಾಯಿಸುತ್ತಿರುವ ಹೊತ್ತಿನಲ್ಲಿಯೇ ಇನ್ನೊಂದು ಸವಾಲು ಎದುರಾಗಿದೆ. —–

ಈ ವರ್ಷ ದೇಶದಲ್ಲಿ ಕೊರತೆ ಮುಂಗಾರು ಎದುರಾಗಲಿದೆ ಎನ್ನುವ ಹವಾಮಾನ ಇಲಾಖೆಯ ಭವಿಷ್ಯ ನಿಜವಾಗದಿರಲೆಂದು ದೇವರಲ್ಲಿ ಪ್ರಾರ್ಥಿಸೋಣ – ಹರ್ಷ ವರ್ಧನ್, ಕೇಂದ್ರ ಭೂ ವಿಜ್ಞಾನ ಸಚಿವ

ವರುಣ ಕೈಕೊಟ್ಟರೆ ದೇಶ ತತ್ತರ: * ಏಷ್ಯಾದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾದ ಭಾರತದ ಪಾಲಿಗೆ ಮುಂಗಾರು ಮಳೆ ನಿರ್ಣಾಯಕ

* ಮುಂಗಾರು ದುರ್ಬಲವಾದರೆ, ಕೇವಲ ಕೃಷಿ ವಲಯ ಮಾತ್ರವಲ್ಲ ದೇಶದ ಆರ್ಥಿಕತೆಗೂ ಪೆಟ್ಟು.

* ದೇಶದಲ್ಲಿ ಕಾರು, ಟಿವಿ, ಚಿನ್ನದ ಒಡವೆ ಮತ್ತಿತರ ವಸ್ತುಗಳನ್ನು ಖರೀದಿಸುವ ಗ್ರಾಹಕರಲ್ಲಿ ಅರ್ಧದಷ್ಟು ಮಂದಿ ಗ್ರಾಮೀಣ ಪ್ರದೇಶಗಳಲ್ಲಿಯೇ ಇದ್ದಾರೆ. ಮಳೆ ಕೈಗೊಟ್ಟರೆ ಎಲ್ಲ ವ್ಯಾಪಾರಗಳಿಗೂ ಧಕ್ಕೆ.

* ಮಳೆ ಕೈಕೊಟ್ಟರೆ ವಿದ್ಯುತ್ ಸಮಸ್ಯೆ ಸೃಷ್ಟಿ. ಬೇಳೆ, ಈರುಳ್ಳಿ, ಖಾದ್ಯ ತೈಲದಂಥ ಆಹಾರ ಪದಾರ್ಥಗಳ ದರಗಳು ಗಗನಮುಖಿ.

* ಭೂಸ್ವಾಧೀನ ವಿಧೇಯಕದ ಮೂಲಕ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಎನ್‌ಡಿಎ ಸರಕಾರಕ್ಕೆ, ಬರ ನಿಭಾಯಿಸುವುದು ಇನ್ನೊಂದು ಸವಾಲಾಗಬಹುದು.

* ಎಲ್ ನಿನೊ ಪರಿಣಾಮದಿಂದ ಭಾರತದಲ್ಲಿ ದುರ್ಬಲ ಮುಂಗಾರು ಸೃಷ್ಟಿ.

ನಿಜಕ್ಕೂ ಇದೊಂದು ಕಳವಳಕಾರಿ ಸುದ್ದಿ. ಕಳೆದ ವರ್ಷ ದುರ್ಬಲ ಮತ್ತು ಅಕಾಲಿಕ ಮಳೆಯಿಂದ ರೈತರು ತತ್ತರಿಸಿದ್ದರು. ಈ ವರ್ಷವೂ ಬರ ಎದುರಾದರೆ, ಪರಿಸ್ಥಿತಿ ತೀವ್ರಗೊಳ್ಳಲಿದೆ. ಅಗತ್ಯವಸ್ತುಗಳ ದರಗಳು ಈಗಾಗಲೇ ಹೆಚ್ಚುತ್ತಿವೆ. ಮುಂಗಾರು ದುರ್ಬಲವಾದರೆ, ದರಗಳು ಇನ್ನಷ್ಟು ಜಾಸ್ತಿಯಾಗುತ್ತವೆ. – ಹರೀಶ್ ಗಾಲಿಪೆಲ್ಲಿ , ಇಂಡಿಟ್ರೇಡ್ ಡಿರೈವೇಟಿವ್ಸ್ ಅ್ಯಂಡ್ ಕಮಾಡಿಟೀಸ್ ಮುಖ್ಯಸ್ಥ

ಏನಿದು ಕೊರತೆ ಮುಂಗಾರು? ಅಳೆಯುವುದು ಹೇಗೆ?
ನಿರೀಕ್ಷೆಗಿಂತಲೂ ಕಡಿಮೆ ಮಳೆಯಾಗುವುದನ್ನು ಕೊರತೆ ಮುಂಗಾರು ಎಂದು ಗುರ್ತಿಸಲಾಗುತ್ತದೆ. 50 ವರ್ಷಗಳ ಸರಾಸರಿ ವಾಡಿಕೆ ಮಳೆಯ ಆಧಾರದಲ್ಲಿ ಶೇ.96ರಿಂದ 104ರಷ್ಟು ಮಳೆಯಾದರೆ ಅದನ್ನು ಸಾಮಾನ್ಯ ಮುಂಗಾರು ಎಂದು ಗುರ್ತಿಸಲಾಗುತ್ತದೆ. ಕಳೆದ ವರ್ಷದ ಮುಂಗಾರು ಮಳೆಯು ಸಾಮಾನ್ಯಕ್ಕಿಂತಲೂ ಶೇ.12ರಷ್ಟು ಕಡಿಮೆಯಿತ್ತು. ಕಳೆದ ಐದು ವರ್ಷಗಳಲ್ಲಿ ಅತ್ಯಂತ ಕೆಟ್ಟ ವಾತಾವರಣ ಕಳೆದ ವರ್ಷ ಸೃಷ್ಟಿಯಾಗಿತ್ತು. ಉತ್ತರ ಪ್ರದೇಶ, ಪಂಜಾಬ್, ಹರಿಯಾಣಾ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು. ಅನೇಕ ರೈತರು ಆತ್ಮಹತ್ಯೆಗೆ ಶರಣಾಗಿದ್ದರು.

ಎಲ್ ನಿನೊ ಭೂತ ‘ಎಲ್ ನಿನೊ’ ಎಂಬ ಪದಕ್ಕೆ ಸ್ಪೇನಿಷ್‌ನಲ್ಲಿ ‘ಸಣ್ಣ ಬಾಲಕ’ ಎಂಬ ಅರ್ಥವಿದೆ. ಆದರೆ, ಹವಾಮಾನ ಪರಿಭಾಷೆಯಲ್ಲಿ ಬೇರೆಯದೇ ಅರ್ಥ. ಫೆಸಿಫಿಕ್ ಸಾಗರದಲ್ಲಿ ಅಸಹಜ ತಾಪಮಾನದ ಪರಿಣಾಮ ‘ಎಲ್ ನಿನೊ’ ಸೃಷ್ಟಿಯಾಗಿದ್ದು, ಇದು ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದೆ. ಮಳೆ ಮಾರುತಗಳ ದಿಕ್ಕು ಬದಲಿಸುತ್ತಿದೆ. 126 ವರ್ಷಗಳ ಮಾಹಿತಿಯನ್ನು ಗಮನಿಸಿದರೆ, 1880ರಿಂದ ಈಚೆಗೆ ಎಲ್ ನಿನೊ ಪರಿಣಾಮದಿಂದ ದುರ್ಬಲ ಮುಂಗಾರು ಸೃಷ್ಟಿಯಾಗುತ್ತಿರುವುದನ್ನು ಕಾಣಬಹುದು. ಭಾರತದಲ್ಲಿ ಇದರ ಪರಿಣಾಮ ಬರಗಾಲವೂ ಸೃಷ್ಟಿಯಾಗಿದೆ. **

ದೇಶಕ್ಕೆ ನೀಡಿದ ಹವಾಮಾನ ವರದಿ ಕರ್ನಾಟಕಕ್ಕೂ ಅನ್ವಯವಾಗುತ್ತದೆ. ಮಳೆಯ ಪ್ರಮಾಣ ಕಡಿಮೆ ಆಗಲಿದೆ ಎಂಬ ಮಾಹಿತಿ ನಮಗೂ ಬಂದಿದೆ. ರಾಜ್ಯ ಸರಕಾರಕ್ಕೆ ಈ ಮಾಹಿತಿಯನ್ನು ಕಳುಹಿಸಿ ಕೊಡಲಾಗುವುದು. ಹಿಂದಿನ ವರ್ಷ ಎಲ್‌ನೀನೋ ರಾಜ್ಯದ ಮೇಲೆ ಪರಿಣಾಮ ಬೀರಲಿಲ್ಲ. ಹೀಗಾಗಿ ಹವಾಮಾನದಲ್ಲಿ ಬದಲಾವಣೆಗಳು ಆಗುವ ಸಾಧ್ಯತೆ ಇದೆ. -ಗೀತಾ ಅಗ್ನಿಹೋತ್ರಿ, ನಿರ್ದೇಶಕರು, ಹವಾಮಾನ ಇಲಾಖೆ.

ಈ ವರ್ಷ ಮಳೆಯ ಪ್ರಮಾಣ ಕಡಿಮೆ ಆಗಲಿದೆ ಎಂಬ ಮಾಹಿತಿಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ. ಇದೇ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಕೃಷಿ ಆಯುಕ್ತರ ಎರಡು ದಿನಗಳ ಸಭೆಯನ್ನು ಮಂಗಳವಾರ ಕರೆಯಲಾಗಿದೆ. ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಪರ್ಯಾಯ ಬೆಳೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ಯೋಜನೆ ರೂಪಿಸಲಾಗುವುದು. -ಪಾಂಡುರಂಗನಾಯಕ, ಕೃಷಿ ಆಯುಕ್ತರು

Write A Comment