ರಾಷ್ಟ್ರೀಯ

ಕಾಲ್ ಡ್ರಾಪ್: ಗ್ರಾಹಕರ ಜೇಬಿಗಿನ್ನಿಲ್ಲ ಕತ್ತರಿ

Pinterest LinkedIn Tumblr

mobile-jpg

ಹೊಸದಿಲ್ಲಿ: ಫೋನ್ ಮಾಡಿದಾಗ ಮಾತನಾಡದೇ ಹೋದರೂ ಕಾಲ್ ಡ್ರಾಪ್ ಆಗುತ್ತಿದ್ದ ಸಮಸ್ಯೆಗಿನ್ನು ಪರಿಹಾರ ಸಿಗುತ್ತಿದೆ. ಕಾಲ್ ಡ್ರಾಪ್ ಆದ ಕರೆಗಳಿಗೆ ವಿಧಿಸಲಾದ ಶುಲ್ಕವನ್ನು ಮರುಪಾವತಿಸಲಾಗುತ್ತದೆ ಅಥವಾ ಹೆಚ್ಚುವರಿ ಕರೆ ಸಮಯವನ್ನು ನೀಡಲು ಸರಕಾರ ನಿರ್ದೇಶಿಸಲು ಚಿಂತಿಸಿದೆ.

ವಿಶ್ವದಲ್ಲಿ ಮೊಬೈಲ್ ಸೇವಾ ಮಾರುಕಟ್ಟೆಯಲ್ಲಿ ಚೀನಾದ ನಂತರದ ಸ್ಥಾನದಲ್ಲಿರುವ ಭಾರತದಲ್ಲಿ ಕಾಲ್ ಡ್ರಾಪ್ ಸಮಸ್ಯೆ ಗ್ರಾಹಕರನ್ನು ಅತೀವ ಕಾಡುತ್ತಿದೆ. ಅಗ್ಗದ ಕರೆ ದರ ಮತ್ತು ಮೊಬೈಲ್‌ನಲ್ಲಿ ಅಂತರ್ಜಾಲ ಬಳಕೆ ಭಾರತದಲ್ಲಿ ಹೆಚ್ಚುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಗುಣಮಟ್ಟದ ಸೇವೆ ನೀಡುವಲ್ಲಿ ತೊಂದರೆಯಾಗುತ್ತಿದೆ.

ಕಂಪನಿಯಿಂದಾದ ತೊಂದರೆಗೆ ಗ್ರಾಹಕನ ಜೇಬಿಗೆ ಕತ್ತರಿ ಬೀಳುವುದನ್ನು ತಪ್ಪಿಸಲು ಸರಕಾರ ಚಿಂತಿಸುತ್ತಿದ್ದು, ಟಿಲಿಕಾಂ ಸಚಿವಾಲಯ ಈ ನಿಟ್ಟಿನಲ್ಲಿ ಅದರಲ್ಲಿಯೂ ಕಾಲ್ ಡ್ರಾಪ್ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲು ಶ್ರಮಿಸುತ್ತಿದೆ. ಕಾಲ್ ಡ್ರಾಪ್‌ನಿಂದ ಪರದಾಡುತ್ತಿದ್ದ ಗ್ರಾಹಕನಿಗೊಂದು ಪರಿಹಾರ ಸಿಕ್ಕಲಿದೆ.

ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಮತ್ತೆ ಮತ್ತೆ ಕಾಲ್ ಡ್ರಾಪ್ ಸಮಸ್ಯೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ‘ಕಾಲ್ ಡ್ರಾಪ್ ಅನ್ನು ಕಡಿತಗೊಳಿಸಲೇ ಬೇಕು. ಖಾಸಗಿ ಕಂಪನಿಗಳು ಇದಕ್ಕೆ ತಮ್ಮ ತಂತ್ರಜ್ಞಾನವನ್ನು ಬದಲಿಸಿಕೊಳ್ಳಬೇಕು. ಮೊಬೈಲ್‌ ಕಂಪನಿಗಳು ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತುರ್ತಾಗಿ ಕಾರ್ಯಪ್ರವೃತ್ತವಾಗುವಂತೆ ಟೆಲಿಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ’, ಎಂದು ಎನ್‌ಡಿಎ ಸರ್ಕಾರ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಲ್‌ ಡ್ರಾಪ್ ಸಮಸ್ಯೆಗೆ ಸಂಬಂಧಿಸಿದಂತೆ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವೂ ಸೂಕ್ತ ಕ್ರಮ ಕೈಗೊಳ್ಳಲು ಯತ್ನಿಸಲಿದೆ. ‘ಶೀಘ್ರದಲ್ಲಿಯೇ ಸಮಸ್ಯೆಗೆ ಸೂಕ್ತ ಪರಿಹಾರವೊಂದನ್ನು ಹುಡುಕಲಾಗುತ್ತದೆ. ಇನ್ನು ಆರು ತಿಂಗಳೊಳಗೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ,’ ಎಂದು ಮೂಲಗಳು ತಿಳಿಸಿವೆ. ಆಶ್ಚರ್ಯದ ಸಂಗತಿ ಎಂದರೆ ಮೊಬೈಲ್‌ ಸೇವೆಯ ಕಾಲ್ ಡ್ರಾಪ್ ಹಾಗೂ ಇಂಟರ್ನೆಟ್ ಬ್ರಾಡ್ ಬ್ಯಾಂಡ್‌ ಸಂಪರ್ಕ ಸಮಸ್ಯೆಗೆ ಕಾರಣ ಪತ್ತೆ ಹಚ್ಚಲು ನಡೆಸಿದ ಸಮೀಕ್ಷೆ ವಿಫಲವಾಗಿದೆ.

Write A Comment