ನವದೆಹಲಿ, ಜೂ.1: ನರ್ಸ್ ಅರುಣಾ ಶಾಹಾನ್‌ಭಾಗ್ ಸಾವಿಗೆ ಕಾರಣವಾಗಿರುವ ಆರೋಪಿ ಸೋಹನ್‌ಲಾಲ್ ಭಾರ್ತ ವಾಲ್ಮೀಕಿಗೆ ಗ್ರಾಮಸ್ಥರು ಬಹಿಷ್ಕಾರ ಹಾಕಲು ತೀರ್ಮಾನಿಸಿದ್ದಾರೆ. ಪ್ರಸ್ತುತ ಇಲ್ಲಿಂದ 75 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಹಾರ್‌ಪುರ್ ಸಮೀಪವಿರುವ ಪಾರ್ಪ ಗ್ರಾಮದಲ್ಲಿ ಕಳೆದ ಮೂರು ದಶಕಗಳಿಂದ ಇಲ್ಲಿಯೇ ಸೋಹನ್‌ಲಾಲ್ ಭಾರ್ತ ವಾಲ್ಮೀಕಿ ವಾಸ ಮಾಡುತ್ತೀದ್ದಾನೆ.
ಇದೀಗ ಈ ಗ್ರಾಮ ರಾಷ್ಟ್ರ ಹಾಗೂ ವಿದೇಶದಲ್ಲಿ ಸುದ್ದಿಯಾಗಿದೆ. ಕಾರಣ ಮುಂಬೈನ ಅಸ್ಪತ್ರೆಯಲ್ಲಿ ಕಳೆದ ನಾಲ್ಕು ದಶಕಗಳ ಹಿಂದೆ ನರ್ಸ್ ಕೆಲಸ ಮಾಡುತ್ತಿದ್ದ ಅರುಣಾ ಶಹನಾಭಾಗ್ ಮೇಲೆ ಭಾರ್ತ ಆತ್ಯಾಚಾರ ನಡೆಸಿದ್ದ.ಅಂದಿನಿಂದ ಕೊನೆಯುಸಿರೆಳೆಯುವವರೆಗೂ ಅರುಣಾ, ಶರಶಯ್ಯೆದಲ್ಲಿ ಕಾಲ ನೂಕಿ, ಇತ್ತೀಚೆಗಷ್ಟೇ ಸಾವನ್ನಪ್ಪಿದ್ದರು. ಈ ಘಟನೆಯ ಬಳಿಕ ಪರ್ಪಾ ಗ್ರಾಮ ಏಕಾಏಕಿ ಸುದ್ದಿಗೆ ಗ್ರಾಸವಾಗಿದೆ. ಈ ಗ್ರಾಮಕ್ಕೆ ದೇಶ ವಿದೇಶಗಳ ಸುದ್ದಿ ವಾಹಿನಿಗಳು ಬಂದು ಸೋಹನ್‌ಲಾಲ್‌ನನ್ನು ಸಂದರ್ಶನ ನಡೆಸಿದ್ದವು.
ನಾನು ಆತ್ಯಾಚಾರ ನಡೆಸಿರಲಿಲ್ಲ. ಅಂದು ನಡೆದ ಘಟನೆ ಬಗ್ಗೆ ನನಗೆ ನೆನಪಿಲ್ಲ ಎಂದು ಈತ ಹೇಳಿದ್ದ. ಈಗ ಗ್ರಾಮದ ಮುಖಂಡರು ಪಂಚಾಯತ್ ಸಭೆ ನಡೆಸಿ ಸೋಹನ್‌ಲಾಲ್‌ನನ್ನು ಗ್ರಾಮದಿಂದ ಬಹಿಷ್ಕಾರ ಹಾಕಲು ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿದೆ. ಆತ ಕಳೆದ ಮೂರು ದಶಕಗಳಿಂದ ನಮ್ಮ ಗ್ರಾಮದಲ್ಲಿ ವಾಸ ಮಾಡುತ್ತಿದ್ದಾನೆ. ಮಹಿಳೆ ಮೇಲೆ ಆತ್ಯಾಚಾರ ನಡೆಸಿರುವುದು ನಮಗೆ ಗೊತ್ತಿರಲಿಲ್ಲ. ಅರುಣಾ ಶಹನಾಭಾಗ್ ಸಾವಿನ ಬಳಿಕ ಈ ವಿಷಯ ಮಾಧ್ಯಮಗಳ ಮೂಲಕ ತಿಳಿಯಿತು. ನೋಡುವುದಕ್ಕೆ ತುಂಬಾ ಸಭ್ಯಸ್ಥನಂತೆ ಕಾಣುತ್ತಿದ್ದ ಆತ ಇಂತಹ ಹೀನಕೃತ್ಯ ನಡೆಸಿರುವುದನ್ನು ತಿಳಿದು ಆಘಾತವಾಯಿತು. ಇಂತಹವರು ನಮ್ಮ ಗ್ರಾಮದಲ್ಲಿ ಇರುವುದರಿಂದ ನಮ್ಮ ಊರಿಗೂ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಆತನಿಗೆ ಗ್ರಾಮದಿಂದಲೇ ಬಹಿಷ್ಕಾರ ಹಾಕಲು ತೀರ್ಮಾನಿಸಿದ್ದೇವೆ. ಈ ವಾರದ ಆಂತ್ಯಕ್ಕೆ ಮತ್ತೊಂದು ಸುತ್ತಿನ ಸಭೆ ನಡೆಸಿ ನಿರ್ಣಯ ಪ್ರಕಟಿಸಲಿದ್ದೇವೆಂದು ಪರ್ಪ ಗ್ರಾಮದ ಪಂಚಾಯತ್ ಮುಖ್ಯಸ್ಥ ಜೋಗಿಂದರ್ ಸಿಂಗ್ ತಿಳಿಸಿದ್ದಾನೆ.
ಆದರೆ, ಗ್ರಾಮಸ್ಥರ ಆರೋಪವನ್ನು ಆತನ ಕುಟುಂಬದ ಸದಸ್ಯರು ಒಪ್ಪುತ್ತಿಲ್ಲ. ಸೋಹನ್‌ಲಾಲ್ ಯಾವ ತಪ್ಪನ್ನೂ ಮಾಡಿಲ್ಲ. ಕೆಲವು ಮಾಧ್ಯಮಗಳು ತೇಜೋವಧೆ ಮಾಡಲು ಪಿತೂರಿ ನಡೆಸುತ್ತಿವೆ ಎಂದು ಸಂಬಂಧಿಕರು ದೂರಿದ್ದಾರೆ. ಮುಂಬೈನ ಅಸ್ಪತ್ರೆಯಲ್ಲಿ ಈತ ಆತ್ಯಾಚಾರ ನಡೆಸಿದ್ದ.