ರಾಷ್ಟ್ರೀಯ

ಪೊಲೀಸರ ವಶದಲ್ಲಿ ಪಾಕಿಸ್ತಾನದ ಗೂಢಚಾರಿ ಪಾರಿವಾಳ

Pinterest LinkedIn Tumblr

pigion

ಚಂಡೀಗಢ: ಪಾಕಿಸ್ತಾನದಿಂದ ಅಕ್ರಮವಾಗಿ ಹಾರಿ ಬಂದಿರುವ ಬಿಳಿ ಪಾರಿವಾಳವನ್ನು ಪಂಜಾಬ್‌ನ ಗಡಿ ಭಾಗದ ಪಠಾಣ್‌ಕೋಟ್‌ ಗ್ರಾಮದಲ್ಲಿ ಗುರುವಾರ ವಶಪಡಿಸಿಕೊಳ್ಳಲಾಗಿದೆ.

ಬಂಧನಕ್ಕೊಳಗಾಗಿರುವ ಪಾರಿವಾಳವೀಗ ಗುಪ್ತಚರ ಸಂಸ್ಥೆ ಹಾಗೂ ಪಂಜಾಬ್ ಪೊಲೀಸರ ಕಳವಳಕ್ಕೂ ಕಾರಣವಾಗಿದೆ. ಪಾರಿವಾಳ ಪ್ರಕರಣ ವರದಿಯಾಗುವುದಕ್ಕೂ ಮುನ್ನ ಜಮ್ಮು ಹಾಗೂ ಪಠಾಣ್‌ಕೋಟ್‌ ಪ್ರದೇಶದಲ್ಲಿ ಇಂಡಿಯನ್‌ ಮುಜಾಹಿದಿನ್‌ ಉಗ್ರ ಸಂಘಟನೆ ಸಕ್ರಿಯವಾಗಿರುವ ಕುರಿತು ಪಂಜಾಬ್‌ ಪೊಲೀಸರನ್ನು ಗುಪ್ತಚರ ಸಂಸ್ಥೆಯಾದ ಐಬಿ ಎಚ್ಚರಿಸಿತ್ತು.

ದೇಶದ ಗಡಿಯೊಳಗೆ ಅತಿಕ್ರಮ ಪ್ರವೇಶ ಮಾಡಿರುವ ಪಾರಿವಾಳ ಸಂದೇಶವೊಂದನ್ನು ರವಾನಿಸುತ್ತಿದ್ದುದು ಹಾಗೂ ಅದು ತಂತಿಯಂಥ ಸಲಕರಣೆಯನ್ನು ಹೊಂದಿದ್ದುದು ಭದ್ರತಾ ಸಂಸ್ಥೆಗಳು ಎಚ್ಚರಿಕೆಯಿಂದ ಪರಿಶೀಲಿಸಲು ಕಾರಣವಾಗಿದೆ. ಭಾರತದ ಗಡಿಗೆ ಅಕ್ರಮವಾಗಿ ನುಗ್ಗಿದ್ದ ಪಾರಿವಾಳದ ಕಾಲಿನಲ್ಲಿದ್ದ ಸಂದೇಶದ ಒಂದು ಭಾಗ ಉರ್ದುವಿನಲ್ಲಿತ್ತು. ಅದರಲ್ಲಿದ್ದ ಸ್ಥಿರ ದೂರವಾಣಿ ಸಂಖ್ಯೆ ಪಾಕಿಸ್ತಾನದ ನರವಾಲ್‌ ಜಿಲ್ಲೆಯದ್ದಾಗಿತ್ತು.

ಪಾಕಿಸ್ತಾನದ ಗಡಿಯಿಂದ ನಾಲ್ಕು ಕಿಮೀ ದೂರದಲ್ಲಿರುವ ಮನ್ವಾಲ್‌ ಎಂಬ ಗ್ರಾಮದ ಕ್ಷೌರಿಕ ರಮೇಶ್‌ಚಂದ್ರ ಎಂಬವರ ಮಣ್ಣು ಹಾಗೂ ಇಟ್ಟಿಗೆಯ ಮನೆಯ ಮೇಲೆ ಬುಧವಾರ ಸಂಜೆ 6.30ರ ಸುಮಾರಿಗೆ ಈ ಪಾರಿವಾಳ ಪ್ರತ್ಯಕ್ಷವಾಗಿತ್ತು. ಅದರ ಮೇಲೆ ಬರೆದಿದ್ದ ಉರ್ದು ಅಕ್ಷರಗಳನ್ನು ಕಂಡ ರಮೇಶ್‌ಚಂದ್ರ ಅವರ 14 ವರ್ಷದ ಪುತ್ರನಿಗೆ ಅನುಮಾನ ಮೂಡಿದೆ. ಆತ ಈ ಬೇಹುಗಾರ ಹಕ್ಕಿಯೊಂದಿಗೆ ರಾತ್ರಿ 9 ಗಂಟೆಗೆ ಹತ್ತಿರದ ಪೊಲೀಸ್‌ ಠಾಣೆಗೆ ಹೋಗಿದ್ದಾನೆ.

ಗಡಿ ಭಾಗದಲ್ಲಿ ಮೊಬೈಲ್‌ ಫೋನ್‌ಗಳು ಕಾರ್ಯನಿರ್ವಹಿಸುವುದು ಅಪರೂಪ. ಹಾಗಾಗಿ ನನ್ನ ಮಗ ಹತ್ತಿರದ ಪೊಲೀಸ್‌ ಠಾಣೆಗೆ ಹಕ್ಕಿ ಸಹಿತ ದೌಡಾಯಿಸಿದ್ದ ಎಂದು ರಮೇಶ್‌ಚಂದ್ರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಬಾಲಕನಿಂದ ಪಾರಿವಾಳವನ್ನು ವಶಕ್ಕೆ ಪಡೆದ ಪೊಲೀಸರು, ಪಠಾಣ್‌ಕೋಟ್‌ನಲ್ಲಿರುವ ಪಶು ಆಸ್ಪತ್ರೆಗೆ ಒಯ್ದು ಎಕ್ಸ್‌ರೇ ಪರೀಕ್ಷೆ ಮಾಡಿಸಿದ್ದಾರೆ. ಆದರೆ ಹೊಸ ಸಾಕ್ಷ್ಷಗಳೇನೂ ಸಿಗಲಿಲ್ಲ. ನಮಗೆ ಅನುಮಾನಾಸ್ಪದ ವಸ್ತುಗಳೇನೂ ಪಕ್ಷಿಯ ಒಳಗೆ ಕಾಣಸಿಗಲಿಲ್ಲ. ಆದರೆ ನಾವೀಗ ಹಕ್ಕಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪಠಾಣ್‌ಕೋಟ್‌ ಜಿಲ್ಲೆಯ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ರಮೇಶ್‌ ಕೌಶಲ್ ಹೇಳಿದ್ದಾರೆ.

Write A Comment