ಕರ್ನಾಟಕ

ಬೆಂಗಳೂರಲ್ಲಿ 21 ಕೆರೆಗಳ ಒತ್ತುವರಿ : ಕ್ರಿಮಿನಲ್ ಕೇಸ್ ದಾಖಲಿಸಲು ಶಿಫಾರಸು

Pinterest LinkedIn Tumblr

Bang-land-aquai

ಬೆಂಗಳೂರು, ಮೇ 29- ರಾಜಧಾನಿ ಬೆಂಗಳೂರು ಸುತ್ತುಮುತ್ತ ಸುಮಾರು ಐದು ಸಾವಿರ ಕೋಟಿಗೂ ಅಧಿಕ ಮೌಲ್ಯದ 21 ಕೆರೆಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಕೆರೆ ಒತ್ತುವರಿ ಸದನ ಸಮಿತಿ ಪತ್ತೆ ಮಾಡಿದೆ. ಸುಮಾರು 800 ರಿಂದ ಒಂದು ಸಾವಿರ ಎಕರೆ ಒತ್ತುವರಿಯಾಗಿದ್ದು, ಇದರಲ್ಲಿ ಬಿಡಿಎ,

ಕೆಐಎಡಿಬಿ, ಸಾರಿಗೆ, ಖಾಸಗಿ ಬಿಲ್ಡರ‌ಸ್ುಾಗಳು, ರಿಯಲ್ ಎಸ್ಟೇಟ್ ಮಾಫಿಯಾಗಳು, ಭೂಗಳ್ಳರು, ಸರ್ಕಾರಿ ಅಧಿಕಾರಿಗಳು ಶಾಮೀಲಾಗಿರುವುದು ಸಾಬೀತಾಗಿದೆ. ಕೆರೆ ಒತ್ತುವರಿ ಮಾಡಿಕೊಂಡಿರುವ   ಭೂಗಳ್ಳರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇದರಲ್ಲಿ ಶಾಮೀಲಾಗಿರುವವರ ಮೇಲೆ ಕ್ರಿಮಿನಲ್ ಕೇಸ್ ಮೊಕದ್ದಮೆ ದಾಖಲಿಸುವುದು, ಅಕ್ರಮವನ್ನು ಸಕ್ರಮ ಮಾಡಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಬೆಂಗಳೂರು ಸುತ್ತಮುತ್ತ ಕೆರೆ ಒತ್ತುವರಿ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಶಾಸಕ ಕೆ.ಬಿ.ಕೋಳಿವಾಡ ಅಧ್ಯಕ್ಷತೆಯಲ್ಲಿ ವಿಧಾನಸಭೆಯ ಸಮಿತಿಯೊಂದನ್ನು ರಚನೆ ಮಾಡಿತ್ತು.

ಈ ಸಮಿತಿಯು ಜೂ.9ರಂದು ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಲಿದ್ದು, ಸಮಿತಿಯಲ್ಲಿರುವ ಪ್ರಮುಖ ಅಂಶಗಳು ಈ ಸಂಜೆಗೆ ಲಭ್ಯವಾಗಿವೆ.  ಕೆ.ಬಿ.ಕೋಳಿವಾಡ ನೇತೃತ್ವದ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಬಿ.ಆರ್.ಯಾವಗಲ್, ಎಸ್.ಸುರೇಶ್‌ಕುಮಾರ್, ಇ.ತುಕಾರಾಮ್, ಎನ್.ಎ.ಹ್ಯಾರಿಸ್, ಕೆ.ಎಸ್.ಪುಟ್ಟಣ್ಣಯ್ಯ, ಎಂ.ಕೃಷ್ಣಪ್ಪ , ಡಾ.ಕೆ.ಸುಧಾಕರ್ ಮತ್ತು ಕೆ.ಗೋಪಾಲಯ್ಯ ಸದಸ್ಯರಾಗಿದ್ದರು. ಬೆಂಗಳೂರು ಸುತ್ತಮುತ್ತ ನಡೆದಿರುವ ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಸಮಿತಿ ಸದಸ್ಯರು ಹಲವಾರು ಬಾರಿ ಸ್ಥಳಗಳಿಗೆ ಭೇಟಿ ನೀಡಿ ಒತ್ತುವರಿಯಾಗಿರುವುದನ್ನು ಪರಿಶೀಲಿಸಿದ್ದರು.  ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 21 ಕೆರೆಗಳನ್ನು ಬಿಡಿಎ, ಕೆಐಎಡಿಬಿ, ಸಾರಿಗೆ, ರಿಯಲ್ ಎಸ್ಟೇಟ್ ಮಾಫಿಯಾಗಳು, ಬಿಲ್ಡರ‌ಸ್ಮಿಗಳು, ಭೂಗಳ್ಳರು, ಸರ್ಕಾರಿ ಅಧಿಕಾರಿಗಳ ಜತೆ ಶಾಮೀಲಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಸದನ ಸಮಿತಿ ಪತ್ತೆ ಮಾಡಿದೆ.

ಬಿಡಿಎ ಸಿಂಹಪಾಲು: ಕೆರೆ ಒತ್ತುವರಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿಂಹಪಾಲು ಪಡೆದುಕೊಂಡಿದೆ. ಸರಿಸುಮಾರು 600ಕ್ಕೂ ಹೆಚ್ಚು ಎಕರೆಯನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡಿದೆ.
2004ರಿಂದಲೂ ಬಿಡಿಎ ಬೆಂಗಳೂರು ಸುತ್ತಮುತ್ತ ಒತ್ತುವರಿ ಮಾಡಿಕೊಂಡಿದ್ದು, ಕೆಲ ಅಧಿಕಾರಿಗಳು ಭೂಗಳ್ಳರ ಜತೆ ಕೈ ಜೋಡಿಸಿ ಸರ್ಕಾರಿ ಜಮೀನನ್ನೇ ಖಾಸಗಿಯವರಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ.

ಸಾರಿಗೆ: ಸಾರಿಗೆ ಇಲಾಖೆಯು ನಗರದ ಸುತ್ತಮುತ್ತ ಬಸ್ ನಿಲ್ದಾಣ, ಟರ್ಮಿನಲ್, ವಾಣಿಜ್ಯ ಮಳಿಗೆಗಳ ನಿರ್ಮಾಣ ಮಾಡಲು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದೆ.

ಕೆಐಎಡಿಬಿ: ಇನ್ನು ಕೆರೆ ಒತ್ತುವರಿಯಲ್ಲಿ ಕೆಐಎಡಿಬಿ ಕೂಡ ಹಿಂದೆ ಬಿದ್ದಿಲ್ಲ. ಕೈಗಾರಿಕೆಗಳ ಉದ್ದೇಶಕ್ಕಾಗಿ ಕೆರೆ ಜಮೀನನ್ನೇ ಅನೇಕ ಉದ್ಯಮಿಗಳಿಗೆ ಪರಭಾರೆ ಮಾಡಿಕೊಟ್ಟಿದೆ.  5 ಸಾವಿರ ಕೋಟಿ ಮೌಲ್ಯ: ನಗರದಲ್ಲಿ ನಡೆದಿರುವ ಕೆರೆ ಒತ್ತುವರಿ ಜಮೀನಿನ ಒಟ್ಟು ಮೌಲ್ಯ 5 ಸಾವಿರ ಕೋಟಿಗೂ ಅಧಿಕವಾಗಲಿದೆ ಎಂದು ಸಮಿತಿ ಅಂದಾಜು ಮಾಡಿದೆ.
ಸುಮಾರು 800 ರಿಂದ 1000 ಎಕರೆಯನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡಿದ್ದು, ಇಂದಿನ ಮಾರುಕಟ್ಟೆ ಬೆಲೆಯೇ ಒಂದು ಎಕರೆಗೆ ಐದು ಕೋಟಿಗೂ ಅಧಿಕ ಎಂದು ಸಮಿತಿ ಅಂದಾಜಿಸಿದೆ.

ಸಮಿತಿಯ ಶಿಫಾರಸುಗಳು:

ಕೆರೆ ಒತ್ತುವರಿಯಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕಬೇಕೆಂದು ಸದನ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಿಲ್ಡರ‌ಸ್ವರಗಳು, ಭೂ ಮಾಫಿಯಾಗಳು, ಖಾಸಗಿ ಕಟ್ಟಡ ಮಾಲೀಕರ ಆಸ್ತಿಯನ್ನು  ಮುಟ್ಟುಗೋಲು ಹಾಕಿಕೊಳ್ಳಬೇಕು, ವಂಚನೆಗೊಳಗಾಗಿರುವ ಅಮಾಯಕರಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಹೇಳಿದೆ.  ಬಿಡಿಎ ವಿತರಣೆ ಮಾಡಿರುವ ನಿವೇಶನಗಳನ್ನು ಖರೀದಿಸಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವವರಿಗೆ ಪರಿಹಾರ ಒದಗಿಸಬೇಕು. ಅಕ್ರಮವನ್ನು ಸಕ್ರಮ ಮಾಡಬೇಕು.

ಅಧಿಕಾರಿಗಳ ಶಾಮೀಲು: ಕೆರೆ ಒತ್ತುವರಿ ಪ್ರಕರಣದಲ್ಲಿ ಬಿಡಿಎ, ಬಿಬಿಎಂಪಿ ಅಧಿಕಾರಿಗಳು ಶಾಮೀಲಾಗಿರುವುದು ಸಮಿತಿಯ ತನಿಖೆಯಿಂದ ಗೊತ್ತಾಗಿದೆ. ಅದರಲ್ಲೂ ಪ್ರಮುಖವಾಗಿ ಕಾರ್ಯಪಾಲಕ ಅಭಿಯಂತರರು, ಸರ್ವೇಯರ್‌ಗಳು, ಸಬ್‌ರಿಜಿಸ್ಟ್ರಾರ್‌ಗಳು ದೊಡ್ಡ ಮಟ್ಟದಲ್ಲಿ ಅಕ್ರಮವೆಸಗಿದ್ದಾರೆ. ಸರ್ಕಾರಿ ಜಮೀನು ಎಂಬುದು ಗೊತ್ತಿದ್ದರೂ ಕೂಡ ಬಿಡಿಎ ನಿವೇಶನ ಮಾಡಿದೆ ಎಂಬ ಏಕೈಕ ಕಾರಣಕ್ಕಾಗಿ ಕಣ್ಣು ಮುಚ್ಚಿಕೊಂಡು ನೋಂದಣಿ ಮಾಡಿಕೊಟ್ಟಿದ್ದಾರೆ.

ಎಲ್ಲೆಲ್ಲೂ ಒತ್ತುವರಿ: ನಗರದಲ್ಲಿ ಒಟ್ಟು 21 ಕೆರೆಗಳು ಒತ್ತುವರಿಯಾಗಿವೆ. ಇದರಲ್ಲಿ ಪ್ರಮುಖವಾದವು ಈ ಕೆಳಕಂಡಂತಿವೆ.
ಸ್ಯಾಂಕಿಟ್ಯಾಂಕಿ, ಪುಟ್ಟೇನಹಳ್ಳಿ, ಕೆಂಪಾಂಬುಧಿ, ಧರ್ಮಾಂಬುಧಿ, ಬಾಣಸವಾಡಿ, ಹೆಬ್ಬಾಳ, ಲಿಂಗಣ್ಣಕೆರೆ, ಬೆಳ್ಳಂದೂರು, ಯಮಲೂರು, ಇಟ್ಟಮಡು, ಚಿಕ್ಕಕಲ್ಲಸಂದ್ರ, ಉತ್ತರಹಳ್ಳಿ, ಸಾರಕ್ಕಿ, ಯಡಿಯೂರು, ರಾಜರಾಜೇಶ್ವರಿನಗರದ ಒಡೆಯರಹಳ್ಳಿ, ವರ್ತೂರು, ಕೆಆರ್ ಪುರಂ ಸುತ್ತಮುತ್ತ ಇರುವ ನಂಜಯ್ಯನಕೆರೆ, ಭಟ್ಟರಹಳ್ಳಿ, ಸೊಣ್ಣೇನಹಳ್ಳಿ, ಸೀಗೆಹಳ್ಳಿ, ಸ್ವತಂತ್ರನಗರ, ಬಾಳಯ್ಯನಕೆರೆ ಹಾಗೂ ಕಾಮಾಕ್ಷಿಪಾಳ್ಯ ಕೆರೆಗಳು ಒತ್ತುವರಿಯಾಗಿವೆ.

ಪ್ರಮುಖ ಆರೋಪಿ: ಕೆರೆ ಒತ್ತುವರಿ ಪ್ರಕರಣದಲ್ಲಿ ಬಿಡಿಎ ಹಿರಿಯ ಅಧಿಕಾರಿಯೊಬ್ಬರು ಅಕ್ರಮವೆಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ತಿಳಿದುಬಂದಿದೆ. ಹಲವು ವರ್ಷಗಳಿಂದ ಬಿಡಿಎನಲ್ಲಿ ಕುಳಿತಿರುವ ಅವರ ಕೃಪಾಕಟಾಕ್ಷದಿಂದಲೇ ಇದು ನಡೆದಿದೆ. ಇವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆಯೂ ಸಮಿತಿ ಶಿಫಾರಸು ಮಾಡಿದೆ. ಇದರ ಜತೆಗೆ ಸುಮಾರು 500ಕ್ಕೂ ಹೆಚ್ಚು ಅಧಿಕಾರಿಗಳು ಶಾಮೀಲಾಗಿದ್ದು, ಈ ಎಲ್ಲರ ಮೇಲೆಯೂ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದೆ.
-ವೈ.ಎಸ್. ರವೀಂದ್ರ
-ಈ ಸಂಜೆ

Write A Comment