ರಾಷ್ಟ್ರೀಯ

ಪೇದೆಯಿಂದ ಶೂ ಲೇಸ್ ಕಟ್ಟಿಸಿಕೊಂಡ ಸಚಿವ

Pinterest LinkedIn Tumblr

shoe

ಕೋಲ್ಕೊತಾ: ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳೇ ಸಂದರೂ, ಆಡಳಿತಗಾರರ ಅರಸೊತ್ತಿಗೆ ಪ್ರವೃತ್ತಿ ನಿಂತಿಲ್ಲ. ಇದಕ್ಕೆ ಪಶ್ಚಿಮ ಬಂಗಾಳ ಸಚಿವರೊಬ್ಬರ ವರ್ತನೆ ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಳ ಸಚಿವ ರಚ್‌ಪಾಲ್ ಸಿಂಗ್ ಅವರು ಅಂಗರಕ್ಷಕನಿಂದ ಶೂ ಲೇಸ್ ಕಟ್ಟಿಸಿಕೊಂಡ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಬಿಸಿಬಿಸಿ ಚರ್ಚೆ ಹುಟ್ಟುಹಾಕಿದೆ.

ಕೋಲ್ಕೊತಾದಲ್ಲಿ ನಡೆದ ಪ್ರತಿಮೆ ಲೋಕಾರ್ಪಣೆ ಕಾರ‌್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಯೋಜನಾ ಮತ್ತು ಅಭಿವೃದ್ಧಿ ಸಚಿವ ರಚ್‌ಪಾಲ್ ಅವರು ಪ್ರತಿಮೆಗೆ ಹಾರ ಹಾಕುವ ವೇಳೆ ತಮ್ಮ ಶೂಗಳನ್ನು ತೆಗೆದಿದ್ದರು. ಅದನ್ನು ಅವರು ವಾಪಸ್ ಹಾಕಿಕೊಳ್ಳುವಾಗ ಶೂಲೇಸ್ ಕಟ್ಟುವಂತೆ ಅಂಗರಕ್ಷಕನಿಗೆ ಸೂಚಿಸಿದರು. ಇದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಮಾಧ್ಯಮಗಳು ಸಚಿವರ ವರ್ತನೆಯನ್ನು ಪ್ರಶ್ನಿಸಿವೆ. ಇದು ಬಿಸಿಬಿಸಿ ಚರ್ಚೆಗೆ ಕಾರಣವಾಗುತ್ತಿದ್ದಂತೆ ಪ್ರತಿಪಕ್ಷಗಳ ಕೂಡ ಸಚಿವರ ಮೇಲೆ ಮುಗಿಬಿದ್ದಿವೆ.

ಸಚಿವ ರಚ್‌ಪಾಲ್ ಸಿಂಗ್ ಅವರು ಪೇದೆಯೊಬ್ಬನಿಂದ ಲೇಸ್ ಕಟ್ಟಿಸಿಕೊಳ್ಳುವುದು ಸಮಂಜಸವಲ್ಲ. ಅವರು ತಮ್ಮ ಅಧೀನದಲ್ಲಿರುವ ಸಿಬ್ಬಂದಿಯ ಶೋಷಣೆ ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಕಿಡಿ ಕಾರಿವೆ.

”21ನೇ ಶತಮಾನದಲ್ಲಿ ಇಂತಹ ನಡೆಯನ್ನು ಸಹಿಸಿಕೊಳ್ಳುವವರು ಯಾರೂ ಇಲ್ಲ. ಇದು ತೃಣಮೂಲ ಕಾಂಗ್ರೆಸ್‌ನ ರಾಜಕೀಯ ದಿವಾಳಿತನ,” ಎಂದು ಸಿಪಿಎಂ ನಾಯಕ ವಿಕಾಸ್ ರಾಜನ್ ಭಟ್ಟಾಚಾರ‌್ಯ ಅಭಿಪ್ರಾಯಪಟ್ಟಿದ್ದಾರೆ.

Write A Comment