ರಾಷ್ಟ್ರೀಯ

2ಜಿ ಹಗರಣ: ಬೈಜಲ್ ಗೆ ಒತ್ತಡ ಹಾಕಿದ್ದ ಮಾಜಿ ಪ್ರಧಾನಿ ಸಿಂಗ್?: ಟ್ರಾಯ್ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಲ್

Pinterest LinkedIn Tumblr

Former-PM-Manmohan-Singh-

ನವದೆಹಲಿ: 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ತಮ್ಮ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಒತ್ತಡ ಹೇರಿದ್ದರು ಎಂದು ಟ್ರಾಯ್ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಲ್ ಆರೋಪಿಸಿದ್ದಾರೆ.

2ಜಿ ಹಗರಣದ ಆರೋಪ ಎದುರಿಸುತ್ತಿರುವ ಪ್ರದೀಪ್ ಬೈಜಲ್ ಅವರು ಈ ಬಗ್ಗೆ ತಾವು ಬರೆದಿರುವ ‘ದಿ ಕಂಪ್ಲೀಟ್ ಸ್ಟೋರಿ ಅಫ್ ಇಂಡಿಯನ್ ರಿಫಾರ್ಮ್ಸ್: 2ಜಿ, ಪವರ್ ಅಂಡ್ ಪ್ರೈವೇಟ್ ಎಂಟರ್ ಪ್ರೈಸಸ್ – ಎ ಪ್ರಾಕ್ಟಿಷನರ್ಸ್ ಡೈರಿ’ ಎನ್ನುವ ಪುಸ್ತಕದಲ್ಲಿ ಆರೋಪಿಸಿದ್ದಾರೆ ಎಂದು ಖಾಸಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ತಮ್ಮಂತಹ ನಿಷ್ಠಾವಂತ ಅಧಿಕಾರಿಗಳು ಈ ರೀತಿಯ ವಿಚಾರಣೆ ಎದುರಿಸಲು ಪ್ರಮುಖವಾಗಿ ಅಂದಿನ ಪ್ರಧಾನಿ ಮನಮೋಹಸ್ ಸಿಂಗ್ ಅವರೇ ಕಾರಣ ಎಂದು ಬೈಜಲ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ದಯಾನಿಧಿ ಮಾರನ್ ಅವರನ್ನು ಟೆಲಿಕಾಂ ಸಚಿವರಾಗಿಸುವುದಕ್ಕೆ ತಾವು ವಿರೋಧ ವ್ಯಕ್ತಪಡಿಸಿದ್ದೆವು. ಆದರೂ ಮನಮೋಹಸ್ ಸಿಂಗ್ ಅವರು ದಯಾನಿಧಿ ಅವರನ್ನು ಟೆಲಿಕಾಂ ಸಚಿವರನ್ನಾಗಿಸಿದ್ದರು. ಟೆಲಿಕಾಂ ಇಲಾಖೆಯ ಎಲ್ಲಾ ನಿರ್ಣಯಗಳನ್ನು ಪ್ರಧಾನಿ ಹಾಗೂ ಟೆಲಿಕಾಂ ಸಚಿವರೇ ತೆಗೆದುಕೊಳ್ಳುತ್ತಿದ್ದರು. ನಿರ್ಧಾರ ಕೈಗೊಳ್ಳಲು ನಮಗೆ ಅವಕಾಶವೇ ಸಿಗುತ್ತಿರಲಿಲ್ಲ. ಅಂದಿನ ಪ್ರಧಾನಮಂತ್ರಿ ಹಾಗೂ ಟೆಲಿಕಾಂ ಸಚಿವರು ನೀಡುತ್ತಿದ್ದ ಆದೇಶಗಳನ್ನು ಪಾಲಿಸುವುದಷ್ಟೇ ನಮ್ಮ ಕೆಲಸವಾಗಿತ್ತು. ಯುಪಿಎ2 ಸರ್ಕಾರದಿಂದ ನನ್ನ ವರ್ಚಸ್ಸು ಹಾಳಾಯಿತು ಎಂದು ಬೈಜಲ್ ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಟೆಲಿಕಾಂ ಸಚಿವರ ಆದೇಶಗಳನ್ನು ಪಾಲಿಸದಿದ್ದರೆ ಅಥವಾ ಅವರಿಗೆ ಸಹಕಾರ ನೀಡದಿದ್ದರೆ ನಮಗೆ ಬೆದರಿಕೆ ಹಾಕುತ್ತಿದ್ದರು. 2ಹಗರಣದಲ್ಲಿ ನನಗೆ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ದಯಾನಿಧಿ ಮಾರನ್ ಇಬ್ಬರೂ ಬೆದರಿಕೆ ನೀಡಿದ್ದರು. 2009 ರಲ್ಲಿ ಯುಪಿಎ2 ಸರ್ಕಾರ ಅನೇಕ ತಪ್ಪು ನಿರ್ಧಾರಗಳನ್ನು ಕೈ ಗೊಂಡಿತ್ತು. ನಂತರ ಆ ತಪ್ಪು ನಿರ್ಧಾರಗಳನ್ನು ಅಧಿಕಾರಿಗಳ ಮೇಲೆ ಹಾಕಿತ್ತು. ಅಲ್ಲದೆ, 2ಜಿ ಹಗರಣ ಬೆಳಕಿಗೆ ಬಂದ ನಂತರ ಅನೇಕ ಪ್ರಮುಖ ಕಡತಗಳನ್ನು ಯುಪಿಎ2 ಸರ್ಕಾರ ಕಾಣೆಯಾಗುವಂತೆ ಮಾಡಿತ್ತು ಎಂದು ಪ್ರದೀಪ್ ಬೈಜಲ್ ತಮ್ಮ ಪುಸ್ತಕದಲ್ಲಿ ಆರೋಪಿಸಿದ್ದಾರೆ.

ಇನ್ನು ಮಾಜಿ ಟ್ರಾಯ್ ಅಧ್ಯಕ್ಷ ಪ್ರದೀಪ್ ಬೈಜಲ್ ಅವರ ಈ ವಿವಾದಾತ್ಮಕ ಹೇಳಿಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಪುಸ್ತಕದಲ್ಲಿ ಏನಿದೆ ಎಂಬುದು ನಮಗೆ ತಿಳಿದಿಲ್ಲ. ಕೇವಲ ಸುದ್ದಿ ನೋಡಿ ಅಭಿಪ್ರಾಯಕ್ಕೆ ಬರುವುದು ಸರಿಯಲ್ಲ. ಬೈಜಲ್ ಅವರ ಪುಸ್ತಕ ಬಿಡುಗಡೆಯಾದ ಬಳಿಕವಷ್ಟೇ ಈ ಪ್ರತಿಕ್ರಿಯೆ ನೀಡಬಹುದು ಎಂದು ಹೇಳಿದೆ.

Write A Comment