ನವದೆಹಲಿ: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮದುವೆ ಕಾರ್ಯಕ್ರಮದಲ್ಲಿ ಎಡವಟ್ಟು ಮಾಡಿಕೊಳ್ಳುವ ಮೂಲಕ ನಗೆಪಾಟಲಿಗೆ ಈಡಾಗಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಇತ್ತೀಚೆಗೆ ಸಂಬಂಧಿಕರ ಮದುವೆಗೆಂದು ಚೆನ್ನೈಗೆ ಹೋಗಿದ್ದರು. ಮದುವೆಯಲ್ಲಿ ಪಾಲ್ಗೊಂಡಿದ್ದ ಅವರನ್ನು ಸಂಬಂಧಿಗಳು ವಧುವಿಗೆ ಆಶೀರ್ವಾದ ಮಾಡಿ ಎಂದು ವಿನಂತಿಸಿದ್ದರು. ಅದರಂತೆ ಮಂಗಳ ಸೂತ್ರವನ್ನು ತನ್ನ ಹಣೆಗೆ ಮುಟ್ಟಿಸಿ ವಧುವಿಗೆ ಅಶೀರ್ವಾದ ಮಾಡಬೇಕಿದ್ದ ಸ್ವಾಮಿ, ತಮ್ಮ ಹಣೆಗೆ ಮುಟ್ಟಿಸಿ ನೇರವಾಗಿ ವಧುವಿಗೆ ತಾಳಿ ಕಟ್ಟಲು ಮುಂದಾದರು.
ಈ ವೇಳೆ ಹಿರಿಯ ಮಹಿಳೆಯೊಬ್ಬರು ತಾಳಿ ಕಟ್ಟಲು ಮುಂದಾಗುತ್ತಿರುವ ಸ್ವಾಮಿ ಅವರ ಕೈಯನ್ನು ತಡೆದು ಮದುವೆ ಸಮಾರಂಭದಲ್ಲಿ ಆಗುತ್ತಿದ್ದ ಅಚಾತುರ್ಯವನ್ನು ತಪ್ಪಿಸಿದರು.
ಎಡವಟ್ಟು ಕೂಡಲೇ ಸ್ವಾಮಿ ಅವರ ಗಮನಕ್ಕೆ ಗೊತ್ತಾಗಿ ನಂತರ ಅವರು ಒಂದು ಫುಲ್ ಸ್ಮೈಲ್ ನೀಡಿದರು. ಸುಬ್ರಮಣಿಯನ್ ಸ್ವಾಮಿ ಅವರ ತಾಳಿ ಕಟ್ಟುವ ಅವಾಂತರದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೀಕ್ಷಿಸಿದ ಜನ ನಗುತ್ತಿದ್ದಾರೆ.