ಕೇರಳ: ಮಹಿಳೆಯೊಬ್ಬಳು ತನ್ನ ಇಬ್ಬರು ಪ್ರಿಯಕರರ ಜೊತೆ ಸೇರಿ ತನ್ನ 8 ತಿಂಗಳ ಹೆಣ್ಣು ಮಗುವನ್ನು ನೀರಿನಲ್ಲಿ ಮುಳುಗಿಸಿ ಸಾಯಿಸಿರುವ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದೆ.
ತಿರುವನಂತಪುರದ ಕಡಕಾವೂರ್ ಬಳಿ ಈ ಘಟನೆ ನಡೆದಿದ್ದು, 36 ವರ್ಷದ ಚಂದ್ರಪ್ರಭಾ ಎಂಬ ಮಹಿಳೆ ತನ್ನ ಪ್ರಿಯಕರರಾದ ಅಜೇಶ್ ಮತ್ತು ಸನ್ಯಾಲ್ ಜೊತೆ ಸೇರಿ ತನ್ನ 8 ತಿಂಗಳ ಮಗು ಸುಪ್ರಿಯಾಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ. ಅಕ್ಕಪಕ್ಕದ ನಿವಾಸಿಗಳು ಮಗು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬಯಲಾಗಿದೆ.
ಮಗುವಿನ ಶವ ಪರೀಕ್ಷೆ ನಡೆಸಿದ ವೇಳೆ ಉಸಿರುಗಟ್ಟಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಮಗುವಿನ ತಾಯಿ ಚಂದ್ರಪ್ರಭಾಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಆಕೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಆಕೆ ನೀಡಿದ ಮಾಹಿತಿ ಮೇರೆಗೆ ಕೊಲೆಗೆ ಸಹಕರಿಸಿದ್ದ ಪ್ರಿಯಕರರಾದ ಅಜೇಶ್ ಮತ್ತು ಸನ್ಯಾಲರನ್ನು ಪೊಲೀಸರು ಬಂಧಿಸಿದ್ದಾರೆ.
