ರಾಷ್ಟ್ರೀಯ

ರಾಮಮಂದಿರ ನಿರ್ಮಾಣ : ರಾಜನಾಥ್‌ ಹೇಳಿಕೆಗೆ ಸಾಧು-ಸಂತರು ತೀವ್ರ ಅಸಮಾಧಾನ; ತಕ್ಕ ಪಾಠ ಕಲಿಸುವ ಎಚ್ಚರಿಕೆ

Pinterest LinkedIn Tumblr

RajnathSingh

ಅಯೋಧ್ಯಾ, ಮೇ 14: ಈ ಅವಧಿಯಲ್ಲಿ ರಾಮಮಂದಿರ ನಿರ್ಮಾಣ ಅಸಾಧ್ಯ ಎಂಬ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ಅವರ ಹೇಳಿಕೆಗೆ ಸಾಧು-ಸಂತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಮಮಂದಿರ ನಿರ್ಮಾಣ ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಸಾಧು-ಸಂತರು ಎಚ್ಚರಿಸಿದ್ದಾರೆ.

ಅಧಿಕಾರಕ್ಕೆ ಬರುವ ಮುನ್ನ ಭರವಸೆ ನೀಡಿ ಈಗ ಮಾತು ತಪ್ಪಲು ಮುಂದಾದರೆ ದೇಶದ ಜನ ನಿಮ್ಮನ್ನು ಕ್ಷಮಿಸುವುದಿಲ್ಲ. ಕೂಡಲೇ ಕೊಟ್ಟ ಮಾತನ್ನು ಉಳಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ರಾಮಜನ್ಮಭೂಮಿ ನ್ಯಾಸಾದ ಹಿರಿಯ ಸದಸ್ಯ ಹಾಗೂ ಮಾಜಿ ಸಂಸದ ರಾಮ್‌ವಿಲಾಸ್ ವೇದಾಂತಿ ಆಗ್ರಹಿಸಿದ್ದಾರೆ.

ರಾಜನಾಥ್‌ಸಿಂಗ್ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಡೆದ ಮಹಾಕುಂಭದ ಸಂದರ್ಭದಲ್ಲಿ ಅವರು ಬಿಜೆಪಿ ಅಧಿಕಾರಕ್ಕೆ ಬಂದರೆ ರಾಮಮಂದಿರ ನಿರ್ಮಾಣ ಮಾಡುವುದಾಗಿ ಸಾಧು-ಸಂತರಿಗೆ ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬರುತ್ತಿದ್ದಂತೆ ಕೊಟ್ಟ ಮಾತನ್ನು ತಪ್ಪಿದ್ದಾರೆ ಎಂದು ಅವರು ಲೇವಡಿ ಮಾಡಿದರು.

ಮಂದಿರ ನಿರ್ಮಾಣಕ್ಕೆ ಅನುಮತಿ ಪಡೆಯಲು ರಾಜ್ಯಸಭೆಯಲ್ಲಿ ಅಗತ್ಯ ಸದಸ್ಯರ ಬೆಂಬಲವಿಲ್ಲದಿದ್ದರೆ ಏನಂತೆ, 2016ರ ವೇಳೆಗೆ ಮೇಲ್ಮನೆಯಲ್ಲಿ ಬಿಜೆಪಿ ಸಂಖ್ಯಾಬಲ ಹೆಚ್ಚಾಗಲಿದೆ. ಆಗಲೇ ಅನುಮತಿ ಪಡೆದು ಮಂದಿರ ನಿರ್ಮಾಣಕ್ಕೆ ಬಿಜೆಪಿ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು. ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಮಂದಿರ ನಿರ್ಮಾಣ ಖಚಿತ ಎನ್ನುವ ಭಾವನೆಯೊಂದಿಗೆ ಬಹುಸಂಖ್ಯಾತ ಹಿಂದೂಗಳು ನಿಮಗೆ ಮತ ನೀಡಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಅವರ ಭಾವನೆಗಳಿಗೆ ಧಕ್ಕೆ ತಂದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಆಚಾರ್ಯ ಸತ್ಯೇಂದ್ರದಾಸ್.

ಅದೇ ರೀತಿ ಇನ್ನಿತರ ಹಲವಾರು ಮುಖಂಡರುಗಳಾದ ಮಹಾಂತ ನೃತ್ಯ ಗೋಪಾಲ್‌ದಾಸ್ ಮತ್ತಿತರ ಸಾಧು-ಸಂತರು ಕೂಡ ಬಿಜೆಪಿ ಸರ್ಕಾರದ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕಾನೂನು ಬದ್ಧವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

Write A Comment