ರಾಷ್ಟ್ರೀಯ

ಜಯಲಲಿತಾ ಪರ ತೀರ್ಪು: ‘ಸುಪ್ರೀಂ’ಗೆ ಮೊರೆ: ಸುಬ್ರಮಣಿಯನ್‌ ಸ್ವಾಮಿ

Pinterest LinkedIn Tumblr

pvec13mamsubramanian swamy

ಚೆನ್ನೈ (ಪಿಟಿಐ):  ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ನಿರ್ದೋಷಿ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳು ಇವೆ.

ಕರ್ನಾಟಕ ಹೈಕೋರ್ಟ್ ತೀರ್ಪು ‘ಅಂಕಗಣಿತ ದೋಷದ ದುರಂತ’ ಎಂಬುದನ್ನು ತಾವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದಾಗ ಸಾಬೀತುಪಡಿಸುವುದಾಗಿ ಡಾ. ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಜಯಲಲಿತಾ ಅವರ ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಸ್ವಾಮಿ ಅವರು ಮೂಲ ದೂರುದಾರರು. ಜಯಲಲಿತಾ ಅವರು 1991ರಿಂದ 1996ರ ವರೆಗೆ ಮುಖ್ಯಮಂತ್ರಿ ಆಗಿದ್ದಾಗ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಅವರು 1996ರಲ್ಲಿ ಪ್ರಕರಣ ದಾಖಲಿಸಿದ್ದರು.

ಇದರ ಬೆನ್ನಲ್ಲೇ ಡಿಎಂಕೆ ಸರ್ಕಾರವು  66.65 ಕೋಟಿ ರೂಪಾಯಿಗಳ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳನ್ನು ಜಯಲಲಿತಾ ವಿರುದ್ಧ ದಾಖಲಿಸಿತ್ತು.

ವಿಶೇಷ ನ್ಯಾಯಾಲಯವು ಕಳೆದ ಸೆಪ್ಟೆಂಬರ್‌ನಲ್ಲಿ ತೀರ್ಪು ನೀಡಿ, ಜಯಲಲಿತಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ, 10 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿಷೇಧ ಹೇರಿತ್ತು.

ಕರ್ನಾಟಕ ಹೈಕೋರ್ಟ್, ಸೋಮವಾರ ಜಯಲಲಿತಾ ನಿರ್ದೋಷಿ ಎಂದು ತೀರ್ಪು ನೀಡಿದೆ.

ಮೇಲ್ಮನವಿ ಸಲ್ಲಿಸಲು ಆಗ್ರಹ: ಕರ್ನಾಟಕ ಹೈಕೋರ್ಟ್ ಜಯಲಲಿತಾ ಅವರನ್ನು ನಿರ್ದೋಷಿ ಎಂದು ನೀಡಿರುವ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಮೇಲ್ಮನವಿ ಸಲ್ಲಿಸಬೇಕು ಎಂದು ಡಿಎಂಕೆ ಸೇರಿದಂತೆ ತಮಿಳುನಾಡಿನ ಎಲ್ಲಾ ವಿರೋಧ ಪಕ್ಷಗಳೂ ಆಗ್ರಹಿಸಿವೆ.

ಕರ್ನಾಟಕ ಸರ್ಕಾರದ ವಿಶೇಷ ಅಭಿಯೋಜಕ ಬಿ. ವಿ. ಆಚಾರ್ಯ ಅವರು ತೀರ್ಪಿನ ವಿವರಗಳನ್ನು ಹೇಳಿದ್ದು, ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ ಎಂದು ಕರುಣಾನಿಧಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತೀರ್ಪು ಅನಿರೀಕ್ಷಿತ: ಜಯಲಲಿತಾ ನಿರ್ದೋಷಿ ಎಂಬ ಹೈಕೋರ್ಟ್ ತೀರ್ಪು ತೀರಾ ಅನಿರೀಕ್ಷಿತ ಎಂದು ಡಿಎಂಡಿಕೆ ಮುಖಂಡ ವಿಜಯಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡು ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಇವಿಕೆಎಸ್ ಇಳಂಗೋವನ್ ಮತ್ತು  ಪಿಎಂಕೆ ಮುಖ್ಯಸ್ಥ ಎಸ್. ರಾಮದಾಸ್ ಅವರು ಸಹ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದಿದ್ದಾರೆ.

ಅಭಿಮಾನಿಗಳ ಉತ್ಸಾಹ:  ಜಯಲಲಿತಾ ನಿರ್ದೋಷಿ ಎಂಬ ಹೈಕೋರ್ಟ್ ತೀರ್ಪಿನಿಂದ ಅಭಿಮಾನಿಗಳು ಬಹಳ ಸಂಭ್ರಮಿಸುತ್ತಿದ್ದು, ನಗರದ ಎಲ್ಲಾ ಕಡೆಗಳಲ್ಲಿ  ‘ಅಮ್ಮ’ನ ಬ್ಯಾನರ್, ಕಟೌಟ್‌ ಗಳನ್ನು ಹಾಕಿ ವಿಜಯೋತ್ಸವ ಆಚರಿಸುತ್ತಿದ್ದಾರೆ.

ಸಚಿವರು ಮತ್ತು ಶಾಸಕರು ಪೈಪೋಟಿಯಲ್ಲಿ ಪತ್ರಿಕೆಗಳಿಗೆ ಅರ್ಧ ಮತ್ತು ಪೂರ್ಣ ಪುಟದ ಜಾಹೀರಾತುಗಳನ್ನು  ನೀಡಿ, ‘ಕ್ರಾಂತಿಕಾರಿ ನಾಯಕಿ’ ಎಂಬ ತಲೆಬರಹದಡಿಯಲ್ಲಿ ‘ಅಮ್ಮ’ನನ್ನು ಹಾಡಿಹೊಗಳಿದ್ದಾರೆ.

Write A Comment