ರಾಷ್ಟ್ರೀಯ

ಲಂಚ ನೀಡದ ಮಹಿಳೆಗೆ ಇಟ್ಟಿಗೆಯಿಂದ ಹೊಡೆದ ಟ್ರಾಫಿಕ್ ಹೆಡ್‌ ಕಾನ್‌ಸ್ಟೆಬಲ್

Pinterest LinkedIn Tumblr

delhi-video-capture

ನವದೆಹಲಿ: ಸಾರಿಗೆ ನಿಯಮ ಉಲ್ಲಂಘನೆಗೈದುದನ್ನು ಕಂಡು ವಾಹನ ನಿಲ್ಲಿಸಿ ಲಂಚ ನೀಡುವಂತೆ ಒತ್ತಾಯಿಸಿದಾಗ ಅದನ್ನು ನೀಡಲು ನಿರಾಕರಿಸಿದ ಮಹಿಳೆಗೆ ದಿಲ್ಲಿ ಟ್ರಾಫಿಕ್ ಹೆಡ್‌ ಕಾನ್‌ಸ್ಟೆಬಲ್‌ ಓರ್ವ ಇಟ್ಟಿಗೆಯಿಂದ ಹೊಡೆದು ಹಲ್ಲೆಗೈದ ಘಟನೆ ದಿಲ್ಲಿಯ ಗಾಲ್ಫ್ ಲಿಂಕ್‌ ಪ್ರದೇಶದಲ್ಲಿ ನಡೆದಿದೆ. ಈ ಕಾನ್ ಸ್ಟೇಬಲ್  ಆಕೆಯ ಜತೆಗಿದ್ದ ಆಕೆಯ ಮಗುವನ್ನೂ ಗಾಯಗೊಳಿಸಿ ಬಳಿಕ ಆಕೆಯ ದ್ವಿಚಕ್ರ ವಾಹನವನ್ನು ಹಾನಿಗೈದಿದ್ದಾನೆ.

ಮಹಿಳೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು ಅದರ ಆಧಾರದಲ್ಲಿ ಆರೋಪಿ ಹೆಡ್‌ ಕಾನ್‌ಸ್ಟೆಬಲ್‌  ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿ ತಕ್ಷಣವೇ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ದಿಲ್ಲಿ ಪೊಲೀಸ್‌ ಕಮಿಷನರ್‌ ಬಿ ಎಸ್‌ ಬಸ್ಸಿ ತಿಳಿಸಿದ್ದಾರೆ.

ಹೆಡ್‌ ಕಾನ್‌ಸ್ಟೆಬಲ್‌ ನಡೆಸಿರುವ ಈ ಅಮಾನುಷ ಘಟನೆಯ ಸಿಸಿಟಿವಿ ಚಿತ್ರಿಕೆ ಈಗ ಎಲ್ಲೆಡೆ ಹರಿದಾಡುತ್ತಿದೆ.

ಹಲ್ಲೆಗೊಳಗಾಗಿರುವ ಮಹಿಳೆ ಹೇಳಿರುವಂತೆ  ಹೆಡ್‌ ಕಾನ್‌ಸ್ಟೆಬಲ್‌ ಆಕೆಯ ವಾಹನವನ್ನು ಸಾರಿಗೆ ನಿಯಮ ಉಲ್ಲಂಘನೆಗಾಗಿ ತಡೆದಿದ್ದಾನೆ. ದಂಡದ ಹಣಕ್ಕೆ ರಶೀದಿ ಕೊಡದೆ ಅದನ್ನು ತಾನೇ ಲಂಚವಾಗಿ ಇಟ್ಟುಕೊಂಡಿದ್ದಾನೆ. ರಶೀದಿ ಕೇಳಿದ್ದಕ್ಕೆ ಆತ ಸಿಟ್ಟುಗೊಂಡು ಆಕೆಯ ಮೇಲೆ ಇಟ್ಟಿಗೆಯಿಂದ ಹಲ್ಲೆ ಗೈದಿದ್ದಾನೆ. ಈ ಹಲ್ಲೆಯ ವೇಳೆ ಆಕೆಯ ಜತೆಗಿದ್ದ ಆಕೆಯ ಮಗು ಕೂಡ ಗಾಯಗೊಂಡಿದೆ. ಹೆಡ್‌ ಕಾನ್‌ಸ್ಟೆಬಲ್‌ನ ಕೋಪಕ್ಕೆ ಮಹಿಳೆಯ ದ್ವಿಚಕ್ರ ವಾಹನ ಕೂಡ ಹಾನಿಗೊಳಗಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದಿಲ್ಲಿ ಪೊಲೀಸ್‌ ಕಮಿಷನರ್‌ ಬಿ ಎಸ್‌ ಬಸ್ಸಿ, “ನನ್ನ ಪರವಾಗಿ ಮತ್ತು ದಿಲ್ಲಿ ಪೊಲೀಸ್‌ ಪರವಾಗಿ ನಾನು ಜನರಲ್ಲಿ ಈ ನಾಚಿಕೆಗೇಡಿನ ಘಟನೆಗಾಗಿ, ಪೊಲೀಸ್‌ ದುರ್ವರ್ತನೆಗಾಗಿ  ಕ್ಷಮೆಯಾಚಿಸುತ್ತೇನೆ. ಕಾನೂನು ಮೀರಿ ದುರ್ವರ್ತನೆ ತೋರಿರುವ ಹೆಡ್‌ ಕಾನ್‌ಸ್ಟೆಬಲ್‌ನನ್ನು ತಕ್ಷಣವೇ ಅಮಾನತು ಮಾಡಲಾಗಿದೆ ಮತ್ತು ಆತನ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಲಾಗಿದೆ. ಈ ಘಟನೆಯ ತನಿಖೆಯನ್ನು ನಾವು ನಡೆಸುತ್ತೇವೆ. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರವಹಿಸುತ್ತೇವೆ  ಎಂದಿದ್ದಾರೆ.

Write A Comment