ಲಖನೌ (ಪಿಟಿಐ): ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಗೃಹ ಖಾತೆಯ ರಾಜ್ಯ ಸಚಿವರು ನೀಡಿದ್ದ ಹೇಳಿಕೆಯ ವಿವಾದದ ಕುರಿತು ಸೋಮವಾರ ಅಥವಾ ಮಂಗಳವಾರ ಸಂಸತ್ತಿನಲ್ಲಿ ಹೇಳಿಕೆ ನೀಡಲಾಗುವುದು ಎಂದು ಗೃಹಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.
ಲಖನೌನಲ್ಲಿ ಶನಿವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ದಾವೂದ್ ಇಬ್ರಾಹಿಂ ಕುರಿತ ವಿವಾದದ ಬಗ್ಗೆ ಸಂಸತ್‌ನಲ್ಲಿ ಪ್ರತಿಕ್ರಿಯೆ ನೀಡುತ್ತೇವೆ’ ಎಂದರು.
‘ದಾವೂದ್ ಅಡಗುತಾಣ ಈವರೆಗೂ ಪತ್ತೆಯಾಗಿಲ್ಲ. ಅದು ಪತ್ತೆಯಾದೊಡನೆ ಆತನ ಹಸ್ತಾಂತರದ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು’ ಎಂದು ಗೃಹ ಖಾತೆ ರಾಜ್ಯ ಸಚಿವ ಹರಿಭಾಯ್ ಪರತಿಭಾಯ್ ಚೌಧರಿ ಅವರು ಮೇ 5ರಂದು ಸಂಸತ್ತಿನಲ್ಲಿ ಹೇಳಿದ್ದರು.
ಚೌಧರಿ ಅವರು ಹೇಳಿಕೆ ನೀಡಿದ ನಂತರದ ಕೆಲವು ಗಂಟೆಗಳಲ್ಲಿಯೇ ಗೃಹಖಾತೆಯ ಮತ್ತೊಬ್ಬ ರಾಜ್ಯ ಸಚಿವ ಕಿರಣ್ ರಿಜಿಜು ಅವರು ‘ದಾವೂದ್ ಪಾಕಿಸ್ತಾನದಲ್ಲಿದ್ದಾನೆ’ ಎಂದು ಸಂಸತ್ತಿನ ಹೊರಗಡೆ ಹೇಳಿಕೆ ನೀಡಿದ್ದರು.