ಅಂತರಾಷ್ಟ್ರೀಯ

ರಕ್ಷಣೆ ಸಾಕು, ಹೊರಟು ಹೋಗಿ!: ಭಾರತ ಸೇರಿದಂತೆ 34 ದೇಶಗಳಿಗೆ ನೇಪಾಳ ಸೂಚನೆ

Pinterest LinkedIn Tumblr

nep

ಕಠ್ಮಂಡು/ಹೊಸದಿಲ್ಲಿ: ಭೂಕಂಪಪೀಡಿತ ನೇಪಾಳದಿಂದ ಹೊರ ತೆರಳುವಂತೆ ಭಾರತದ ರಾಷ್ಟ್ರೀಯ ದುರಂತ ಪರಿಹಾರ ಪಡೆ (ಎನ್‌ಡಿಆರ್‌ಎಫ್) ಸೇರಿದಂತೆ 34 ದೇಶಗಳ ರಕ್ಷಣಾ ಮತ್ತು ಪರಿಹಾರ ತಂಡಗಳಿಗೆ ನೇಪಾಳ ಸರಕಾರವು ಸೋಮವಾರ ಸೂಚನೆ ನೀಡಿದೆ.

ಎಲ್ಲ ಬಗೆಯ ರಕ್ಷಣಾ ಕಾರ್ಯಾಚರಣೆಗಳು ಪೂರ್ಣಗೊಂಡಿವೆ. ಉಳಿದ ಕಾರ್ಯಾಚರಣೆಗಳನ್ನು ಸ್ವತಃ ನೇಪಾಳವೇ ನಿರ್ವಹಿಸುತ್ತದೆ. ನೇಪಾಳಕ್ಕೆ ಇನ್ನಷ್ಟು ನೆರವಿನ ಅಗತ್ಯವಿಲ್ಲ ಎಂದು ಸರಕಾರ ತಿಳಿಸಿದೆ.

ಕಠ್ಮಂಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಮುಖ ರಕ್ಷಣಾ ಕಾರ್ಯಾಚರಣೆಗಳು ಮುಕ್ತಾಯವಾಗಿವೆ. ಉಳಿದಿರುವ ಕೆಲಸಗಳನ್ನು ಸ್ಥಳೀಯ ಕಾರ್ಮಿಕರು, ಕಾರ್ಯಕರ್ತರು ನಿರ್ವಹಿಸುತ್ತಾರೆ ಎಂದು ದೇಶದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮಣೀಂದ್ರ ರಿಜಲ್ ಹೇಳಿದ್ದಾರೆ.

ಆದರೆ, ಹಳ್ಳಿಗಳು ಮತ್ತು ಬೆಟ್ಟಗುಡ್ಡಗಳಲ್ಲಿರುವ ಗ್ರಾಮಗಳಲ್ಲಿ ಬಹಳಷ್ಟು ಕೆಲಸಗಳಿವೆ. ಈ ಕೆಲಸಕಾರ್ಯಗಳನ್ನು ಸ್ಥಳೀಯ ಪೊಲೀಸರು ಮತ್ತು ಸೇನೆಯ ಜೊತೆಗೆ ವಿದೇಶಿ ನೆರವು ಕಾರ್ಯಕರ್ತರು ಮುಂದುವರಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದಾಗ ಧಾವಿಸಿ ಬಂದ ಭಾರತದ ನೆರವು ಮತ್ತು ರಕ್ಷಣಾ ಕಾರ್ಯಕರ್ತರು ತಮ್ಮ ಕೆಲಸಗಳಿಗಾಗಿ ಪಡೆದುಕೊಳ್ಳುತ್ತಿರುವ ‘ಅನಗತ್ಯ ಪ್ರಚಾರ’ದ ಹಿನ್ನೆಲೆಯಲ್ಲಿ ದೇಶದಲ್ಲಿ ಅಸಹನೆ ಮತ್ತು ಉದ್ರಿಕ್ತ ಪರಿಸ್ಥಿತಿ ತಲೆದೋರಿದೆ ಎಂದು ನೇಪಾಳ ಸರಕಾರದ ಮೂಲಗಳು ತಿಳಿಸಿವೆ.

‘ನೇಪಾಳದಲ್ಲಿ ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲ 34 ದೇಶಗಳ ತಂಡಗಳು ವಾಪಸ್ ತೆರಳಬೇಕೆಂದು ನೇಪಾಳ ಕೋರಿದೆ’ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

ನೇಪಾಳ ಸರಕಾರದ ಈ ನಿರ್ಧಾರವನ್ನು ಎನ್‌ಡಿಆರ್‌ಎಫ್‌ನ ಮುಖ್ಯಸ್ಥ ಓ.ಪಿ.ಸಿಂಗ್ ಕೂಡ ಖಚಿತಪಡಿಸಿದ್ದಾರೆ. ‘ವಿದೇಶಗಳ ಎಲ್ಲ ರಕ್ಷಣಾ ತಂಡಗಳಿಗೆ ವಾಪಸ್ ತೆರಳುವಂತೆ ಸೂಚಿಸಲಾಗಿದೆ. ಇದರಲ್ಲಿ ಭಾರತ ಕೂಡ ಸೇರಿದೆ. ನಾವು ನೇಪಾಳ ಸರಕಾರದೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇವೆ. ನಮ್ಮ ವೈದ್ಯಕೀಯ ತಂಡ ಮಾತ್ರ ಇಲ್ಲೇ ಉಳಿಯಲಿದೆ. ಈವರೆಗೆ ಯಾವುದೇ ತಂಡ ವಾಪಸ್ ಆಗಿಲ್ಲ. ನಮ್ಮ ಎಲ್ಲ 16 ತಂಡಗಳು ಕಠ್ಮಂಡುನಲ್ಲಿವೆ. ಅವರೆಲ್ಲ ಈಗಲೂ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ’ ಎಂದು ಸಿಂಗ್ ತಿಳಿಸಿದ್ದಾರೆ.

ಭೂಕಂಪ ಸಂಭವಿಸಿದ ನಂತರ 34 ದೇಶಗಳಿಗೆ ಸೇರಿದ ಸುಮಾರು 4,500 ಕಾರ್ಯಕರ್ತರು ನೇಪಾಳದಲ್ಲಿ ರಕ್ಷಣಾ ಮತ್ತು ಪರಿಹಾರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಹುತೇಕ ತಂಡಗಳು ಕಠ್ಮಂಡು ಕಣಿವೆಯ ಸಿಂಧೂಪಲ್‌ಚೊಕ್ ಮತ್ತು ಗೂರ್ಖಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವೆರಡು ಜಿಲ್ಲೆಗಳಲ್ಲಿ ಭೂಕಂಪದಿಂದ ಭಾರೀ ಹಾನಿ, ಸಾವುನೋವು ಉಂಟಾಗಿದೆ.

ಭಾರತೀಯ ಮಾಧ್ಯಮಗಳ ವಿರುದ್ಧವೂ ತೀವ್ರ ಆಕ್ರೋಶ

ಕಠ್ಮಂಡು: ನೇಪಾಳದಲ್ಲಿ 7 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡ ಭೀಕರ ಭೂಕಂಪದ ಕುರಿತ ಸುದ್ದಿಗಳನ್ನು ಭಾರತೀಯ ಮಾಧ್ಯಮಗಳು ಸಂವೇದನಾರಹಿತವಾಗಿ ಹಾಗೂ ಆಕ್ರಮಣಕಾರಿಯಾದ ರೀತಿಯಲ್ಲಿ ಪ್ರಕಟಿಸುತ್ತಿವೆ ಹಾಗೂ ಅವು ಭಾರತೀಯ ಸೇನಾಪಡೆಗಳು ನಡೆಸುತ್ತಿರುವ ಪರಿಹಾರ ಕಾರ್ಯಾಚರಣೆಯನ್ನು ಕೇಂದ್ರ ಸರಕಾರದ ವರ್ಚಸ್ಸನ್ನು ಹೆಚ್ಚಿಸುವುದಕ್ಕೆ ಬಳಸಿಕೊಳ್ಳುತ್ತಿವೆಯೆಂದು, 1 ಲಕ್ಷಕ್ಕೂ ಅಧಿಕ ನೇಪಾಳಿಗರು ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವುದು, ಇಡೀ ವಿಶ್ವದ ಗಮನವನ್ನು ಸೆಳೆದಿದೆ.

ಈ ಬೆಳವಣಿಗೆಯು ಇಡೀ ಭಾರತೀಯ ಮಾಧ್ಯಮಗಳಿಗೊಂದು ಎಚ್ಚರಿಕೆಯ ಕರೆಗಂಟೆಯಾಗಿದೆಯೆಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಸೇರಿದಂತೆ ಕೆಲವು ಗಣ್ಯರು ಪ್ರತಿಕ್ರಿಯಿಸಿದ್ದಾರೆ. ಇದರ ಜೊತೆಗೆ ಹಲವು ಭಾರತೀಯರು ಕೂಡಾ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ನೇಪಾಳಿ ನಾಗರಿಕರ ಅನಿಸಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ.

ವಿಶ್ವ ಪತ್ರಿಕಾ ಸ್ವಾತಂತ್ರ ದಿನವಾದ ಸೋಮವಾರದಂದೇ ‘ಭಾರತೀಯ ಮಾಧ್ಯಮಗಳೇ ಹಿಂದೆ ಹೋಗಿ’ ಎಂಬ ಶೀರ್ಷಿಕೆಯಡಿ ಟ್ವಿಟ್ಟರ್‌ನಲ್ಲಿ ಲಕ್ಷಾಂತರ ಮಂದಿ ಭಾರತೀಯ ಸುದ್ದಿಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

ಭೂಕಂಪದಿಂದ ತತ್ತರಿಸಿರುವ ನೇಪಾಳದ ಪ್ರಜೆಗಳಿಗೆ,ತಾನು ನೀಡುತ್ತಿರುವ ನೆರವನ್ನು ನಿರಂತರವಾಗಿ ಮರುಜ್ಞಾಪಿಸಿಕೊಳ್ಳುವ ಮೂಲಕ, ಅವರು ತಮಗೆ ಚಿರಋಣಿಗಳಾಗಿರಬೇಕೆಂದು ಭಾರತವು ಬಯಸುವುದಾದರೆ ಅದು ವಾಸ್ತವವಾಗಿ ಸೇವೆಯೇ ಅಲ್ಲವೆಂದು ಟ್ವಿಟ್ಟರ್‌ನಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ಮಾಧ್ಯಮಗಳ ಈ ಸ್ವಪ್ರಶಂಸೆಯ ವರ್ತನೆಗೆ, ಸ್ವದೇಶದಲ್ಲೂ ಅಸಮಾಧಾನ ವ್ಯಕ್ತವಾಗಿದೆ. ‘‘ ಭೂಕಂಪದ ನಾಲ್ಕು ದಿನಗಳ ಬಳಿಕ ಕೇಂದ್ರ ಸಹಾಯಕ ಗೃಹ ಸಚಿವ ಕಿರಣ್ ರಿಜ್ಜು, ಸಂಸತ್‌ನಲ್ಲಿ ಹೇಳಿಕೆ ನೀಡಿ, ನೇಪಾಳದ ಪರಿಹಾರ ಕಾರ್ಯಾಚರಣೆಯಲ್ಲಿ ಭಾರತ ಮುಂಚೂಣಿಯಲ್ಲಿದೆಯೆಂದು ತಿಳಿಸಿದ್ದರು.ಇಷ್ಟಕ್ಕೂ ಭಾರತವು ತಾನು ನಡೆಸುತ್ತಿರುವ ಪರಿಹಾರ ಕಾರ್ಯಾಚರಣೆಯನ್ನು ಪದೇ ಪದೇ ಸಾರುವ ಅಗತ್ಯವಿದೆಯೇ’’ ಔಟ್‌ಲುಕ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದು ಪ್ರಶ್ನಿಸಿತ್ತು.

Write A Comment